ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊರರಾಜ್ಯದ ಪವನ್ ಖೇರಾ ಅವರಿಗೆ ಅವಕಾಶ ನೀಡಿರುವುದನ್ನು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ದೆಹಲಿ ಹೈಕಮಾಂಡ್‌ನ ಈ ನಿರ್ಧಾರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಮೌನವನ್ನು ಕಟುವಾಗಿ ಟೀಕಿಸಿದ್ದಾರೆ.
ಪವನ್ ಖೇರಾ ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿರುವ ನಾರಾಯಣಗೌಡರು, ಉತ್ತರ ಭಾರತದ ರಾಜಕಾರಣಿಗಳನ್ನು ರಾಜ್ಯದಿಂದ ಆಯ್ಕೆ ಮಾಡಲು ಕನ್ನಡಿಗರಲ್ಲಿ ಸಮರ್ಥ ನಾಯಕರು ಅಥವಾ ಕಾರ್ಯಕರ್ತರು ಕಾಂಗ್ರೆಸ್‌ಗೆ ಕಾಣಿಸಲಿಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆಯೂ ಇಂತಹದೇ ನಿರ್ಧಾರಗಳಾಗಿದ್ದು, ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಕನ್ನಡಿಗರ ಮತಗಳಿಂದ ಗೆದ್ದು ಹೋಗಿದ್ದರೂ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಹಣಕಾಸು ಹಂಚಿಕೆಯನ್ನು ನೀಡದೆ ದ್ರೋಹ ಬಗೆದಿದ್ದಾರೆ. ಇಂತಹ ಹೊರರಾಜ್ಯದ ನಾಯಕರನ್ನು ಆಯ್ಕೆ ಮಾಡುವುದರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಕರ್ನಾಟಕದ ಜನತೆ ಭಾರಿ ಬಹುಮತ ನೀಡಿ ಆಶೀರ್ವದಿಸಿದ್ದಾರೆ. ಕನ್ನಡಿಗರ ಈ ಔದಾರ್ಯವನ್ನು ಮರೆತು, ಅನ್ಯರಾಜ್ಯಗಳ ನಾಯಕರಿಗೆ ಮಣೆ ಹಾಕಿರುವುದು ಕನ್ನಡಿಗರಿಗೆ ರಾಜ್ಯಸಭೆಯಲ್ಲಿ ಕೂರಲು ಯೋಗ್ಯತೆ ಇಲ್ಲ ಎಂಬಂತೆ ಬಿಂಬಿಸುತ್ತಿದೆ. ಇನ್ಮುಂದೆಯಾದರೂ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗುಲಾಮಗಿರಿಯನ್ನು ಬಿಟ್ಟು, ಈ ದಬ್ಬಾಳಿಕೆಯ ತೀರ್ಮಾನವನ್ನು ಧೈರ್ಯವಾಗಿ ಧಿಕ್ಕರಿಸಬೇಕು ಎಂದು ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ತಕ್ಷಣವೇ ತನ್ನ ಈ ತೀರ್ಮಾನವನ್ನು ಬದಲಾಯಿಸಿ, ಕನ್ನಡಿಗರಿಗೇ ಆ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಡಬೇಕು. ಒಂದು ವೇಳೆ ಹಠಕ್ಕೆ ಬಿದ್ದು ಹೊರರಾಜ್ಯದ ನಾಯಕರನ್ನು ಹೇರಲು ಮುಂದಾದರೆ, ಪಕ್ಷವು ತನ್ನ ಸ್ವಂತ ಕಾಲಿನ ಮೇಲೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಕನ್ನಡಿಗರಿಗೆ ಆಗುತ್ತಿರುವ ನಿರಂತರ ರಾಜಕೀಯ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯು ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ನಾರಾಯಣಗೌಡ ಅವರು ಸ್ಪಷ್ಟಪಡಿಸಿದ್ದಾರೆ.

