Sun. Jun 14th, 2026

ಬೆಂಗಳೂರು ಕಸದ ಟೆಂಡರ್ ಹಗರಣ;ಒತ್ತಡಕ್ಕೆ ಮಣಿಯದೆ ವರದಿ ನೀಡಿ: ಸಮಿತಿಗೆ ಆರ್. ಅಶೋಕ ಪತ್ರ

Share this with Friends

ಬೆಂಗಳೂರು: ರಾಜಧಾನಿಯ ಘನತ್ಯಾಜ್ಯ ನಿರ್ವಹಣೆಯ ₹39,437 ಕೋಟಿ ಮೊತ್ತದ ಮೆಗಾ ಟೆಂಡರ್ ಪರಿಶೀಲನೆಗೆ ರಚನೆಯಾಗಿರುವ ಉನ್ನತ ಮಟ್ಟದ ಸಮಿತಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮಹತ್ವದ ಪತ್ರ ಬರೆದಿದ್ದಾರೆ. ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಗಳಿಗೆ ಮಣಿಯದೆ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ವರದಿ ಸಲ್ಲಿಸುವಂತೆ ಅವರು ಸಮಿತಿಯನ್ನು ಕೋರಿದ್ದಾರೆ.

ಕಾಂಗ್ರೆಸ್ ಸರ್ಕಾರ ರೂಪಿಸಿರುವ ಈ ಬೃಹತ್ ತ್ಯಾಜ್ಯ ನಿರ್ವಹಣಾ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಅಶೋಕ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಇದೀಗ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಉದ್ದೇಶಿಸಿ ಅವರು ಸುದೀರ್ಘ ಪತ್ರ ಬರೆದಿದ್ದಾರೆ.

ತೆರಿಗೆದಾರರ ಹಣಕ್ಕೆ ಕುತ್ತು:

“ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ, ಬದಲಿಗೆ ಬೆಂಗಳೂರಿನ ತೆರಿಗೆ ಪಾವತಿಸುವ ಜವಾಬ್ದಾರಿಯುತ ನಾಗರಿಕರು. ನಿಮ್ಮ ಕುಟುಂಬ ಮತ್ತು ಮಕ್ಕಳ ಭವಿಷ್ಯವೂ ಈ ನಗರದೊಂದಿಗೇ ಬೆಸೆದುಕೊಂಡಿದೆ. ಹೀಗಾಗಿ ಇದು ಕೇವಲ ಒಂದು ಕಡತದ ನಿರ್ಧಾರವಲ್ಲ. ಮುಂದಿನ 30 ವರ್ಷಗಳ ಕಾಲ ಬೆಂಗಳೂರಿನ ಜನರ ಹಣ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಗಂಭೀರ ಪ್ರಶ್ನೆಯಾಗಿದೆ” ಎಂದು ಅಶೋಕ ಪತ್ರದಲ್ಲಿ ನೆನಪಿಸಿದ್ದಾರೆ.

ಹಣಕಾಸು ಇಲಾಖೆಯ ಆಕ್ಷೇಪಣೆ:

ಯೋಜನೆಯ ವೆಚ್ಚ, 30 ವರ್ಷಗಳ ಸುದೀರ್ಘ ಒಪ್ಪಂದದ ಅವಧಿ ಮತ್ತು ನಿರ್ದಿಷ್ಟ ಕಂಪನಿಗಳ ಏಕಸ್ವಾಮ್ಯಕ್ಕೆ ಕಾರಣವಾಗುವ ‘ವೆಂಡರ್ ಲಾಕ್-ಇನ್’ ಅಪಾಯಗಳ ಬಗ್ಗೆ ಸರ್ಕಾರದ ಸ್ವಂತ ಹಣಕಾಸು ಇಲಾಖೆಯೇ ಗಂಭೀರ ಆಕ್ಷೇಪ ಎತ್ತಿರುವುದನ್ನು ಪ್ರತಿಪಕ್ಷ ನಾಯಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. “ಹಣಕಾಸು ಇಲಾಖೆಯ ವರದಿಯಂತೆ, ವಾರ್ಷಿಕ ಶೇ. 5 ರಷ್ಟು ದರ ಹೆಚ್ಚಳ ಜಾರಿಯಾದರೆ ಮುಂದಿನ ಮೂರು ದಶಕಗಳಲ್ಲಿ ಯೋಜನೆಯ ವೆಚ್ಚ ಹಲವು ಪಟ್ಟು ದುಬಾರಿಯಾಗಲಿದೆ. ಇದರ ಅಂತಿಮ ಹೊರೆ ಸರ್ಕಾರದ ಮೇಲಲ್ಲ, ಬೆಂಗಳೂರಿನ ತೆರಿಗೆದಾರ ನಾಗರಿಕರ ಮೇಲೆ ಬೀಳಲಿದೆ” ಎಂದು ಅವರು ಎಚ್ಚರಿಸಿದ್ದಾರೆ.

ಹೊರೆಯ ಮೇಲೆ ಮತ್ತೊಂದು ಹೊರೆ:

“ಬೆಂಗಳೂರಿನ ಜನರು ಈಗಾಗಲೇ ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು ಹಾಗೂ ಬಳಕೆದಾರರ ಶುಲ್ಕಗಳ ಭಾರವನ್ನು ಹೊರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿ ಹಣದ ಬಳಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಸಮಿತಿ ನೀಡುವ ವರದಿ ಕೇವಲ ಒಂದು ದಾಖಲೆಯಲ್ಲ, ಅದು ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುವ ಅಡಿಪಾಯ. ವರದಿಯ ಪ್ರತಿಯೊಂದು ಪದವೂ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ವಿಮರ್ಶೆಗೆ ಒಳಗಾಗಲಿದೆ” ಎಂದು ಅಶೋಕ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಇದು ಇತಿಹಾಸ ಸೇರುವ ಅವಕಾಶ:

ಸರ್ಕಾರಕ್ಕೆ ವರದಿ ನೀಡುವುದು ಕೇವಲ ಅಧಿಕೃತ ಕರ್ತವ್ಯವಲ್ಲ, ಅದಕ್ಕಿಂತ ಮಿಗಿಲಾಗಿ ಬೆಂಗಳೂರಿನ ಜನತೆಗೆ ಮತ್ತು ಸ್ವಂತ ಆತ್ಮಸಾಕ್ಷಿಗೆ ಉತ್ತರಿಸುವ ದೊಡ್ಡ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದ್ದಾರೆ. “ನಾಳೆ ಮುಂದಿನ ಪೀಳಿಗೆ ತಿರುಗಿ ನೋಡಿದಾಗ, ಈ ಸಮಿತಿಯ ಸದಸ್ಯರು ಕೇವಲ ಸರ್ಕಾರದ ನಿರ್ಧಾರಕ್ಕೆ ಕುರುಡಾಗಿ ಮುದ್ರೆ ಒತ್ತಲಿಲ್ಲ; ಬದಲಿಗೆ ಬೆಂಗಳೂರಿನ ಹಿತಾಸಕ್ತಿ ಕಾಯುವ ಕರ್ತವ್ಯ ನಿಭಾಯಿಸಿದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು. ನಗರದ ಭವಿಷ್ಯ ರೂಪಿಸುವ ಈ ಐತಿಹಾಸಿಕ ಅವಕಾಶವನ್ನು ಸಮಿತಿ ನ್ಯಾಯಯುತವಾಗಿ ಬಳಸಿಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಆರ್. ಅಶೋಕ ತಮ್ಮ ಪತ್ರದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

 


Share this with Friends

Related Post