ಮೈಸೂರು, ಮಾ.13: ಸಾರ್ವಜನಿಕರು ನೀರನ್ನು ಅನಾವಶ್ಯಕ ವಾಗಿ ಪೋಲು ಮಾಡದೆ ಮಿತವಾಗಿ ಬಳಸಬೇಕೆಂದು ಶಾಸಕ ಕೆ.ಹರೀಶ್ ಗೌಡ ಮನವಿ ಮಾಡಿದರು.
ಮೈಸೂರಿನ ವಾರ್ಡ್ ನಂ.23, 42 ಮತ್ತು 50ರ ಕಾಕರವಾಡಿ, ಬೆಸ್ತರಗೇರಿ, ಕುಂಬಾರಗೇರಿ, ಕುರುಬಗೇರಿ, ಗೊಲ್ಲಗೇರಿ, ಗೀತಾ ರಸ್ತೆ, ಕೆ ಜಿ ಕೊಪ್ಪಲ್, ಹಳೆ ಬಂಡಿಕೇರಿ, ಗಾಣಿಗರ ಬೀದಿ, ಬೆಳ್ಳಿಕಟ್ಟೆ, ದೇವರಾಜ ಮೊಹಲ್ಲಾ ಭಾಗದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯಕ್ಕೂ ಮೇಲ್ಮಟ್ಟದ ಜಲಸಂಗ್ರಹಾಗರವನ್ನು ನಿರ್ಮಿಸಿ, ರಾಮಸ್ವಾಮಿ ವೃತ್ತದ ಸಮೀಪ ಲಿಂಕಿಂಗ್ ಮಾಡುವ ಅಂದಾಜು 2.10 ಕೋಟಿ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮನೆ,ಮನೆಗೆ ಕುಡಿಯುವ ನೀರಿನ ಪೊರೈಕೆ ದೃಷ್ಠಿಯಿಂದ 2.10 ಕೋಟಿಯ ವೆಚ್ಛದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದಿದ್ದು ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಕುರುಬರ ಬೀದಿ, ಗೊಲ್ಲಗೇರಿ, ಸೋನಾರ್ ಬೀದಿ ಅಗಸಗೇರಿ, ಗೀತಾ ರಸ್ತೆ ಹಾಗೂ ಕೆ ಜಿ ಕೊಪ್ಪಲ್ ಬಡಾವಣೆಗಳಿಗೆ ಕುಡಿಯುವ ನೀರು ಪೊರೈಕೆ ಸಮರ್ಪಕವಾಗಿ ಪೊರೈಕೆಯಾಗಲಿದ್ದು, ಮೈಸೂರು ನಗರಕ್ಕೆ ಇಲ್ಲಿಯವರೆಗೂ ನೀರಿನ ತೊಂದರೆ ಬಂದಿಲ್ಲ ಎಂದು ಹೇಳಿದರು.
ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರು ಹಾಗೂ ವಾಣಿವಿಲಾಸ ನೀರು ಸರಬರಾಜು ಮಂಡಳಿ ತಂಡ ರಚಿಸಿ ಸಹಾಯವಾಣಿ ತೆರೆಯಲಾಗಿದೆ, ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು ಎಂದು ಕೋರಿದರು.
ಮುಖಂಡರಾದ ಕುಮಾರ್, ನವೀನ್, ಬೋರಪ್ಪ, ಅಧಿಕಾರಿ ಪ್ರಸನ್ನ, ಕಂಟ್ರಾಕ್ಟರ್ ರಮೇಶ್, ಮೈಸೂರು ಮಹಾನಗರ ಪಾಲಿಕೆಯ ಇಇ ನಾಗರಾಜ್, ಎಇಇ ಧನುಷ್, ಪ್ರಶಾಂತ್ ಹಾಗೂ ಇತರ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಜರಿದ್ದರು.