Tue. Jun 16th, 2026

ಜೂನ್ 27 ರಂದು ಕೆಂಪೇಗೌಡ ಜಯಂತಿ ಆಚರಣೆ: 15 ಲಕ್ಷ ಸಸಿ ನೆಡಲು ತೀರ್ಮಾನವೆಂದ ಸಿಎಂ

Share this with Friends

ಬೆಂಗಳೂರು: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಇದೇ ಜೂನ್ 27 ರಂದು ಬೆಳಿಗ್ಗೆ 11:30ಕ್ಕೆ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಬಳಿಕ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟನೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ ನಗರದಾದ್ಯಂತ 15 ಲಕ್ಷ ಗಿಡಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಜಯಂತಿ ಆಚರಣೆಯ ಪ್ರಮುಖ ರೂಪುರೇಷೆಗಳು:

ಬೃಹತ್ ಗಿಡ ನೆಡುವ ಅಭಿಯಾನ: ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆಗಾಗಿ 15 ಲಕ್ಷ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಾಲ್ಕು ಗೋಪುರಗಳ ತಂಡಗಳು: ಬೆಂಗಳೂರಿನ ಐತಿಹಾಸಿಕ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪ್ರತ್ಯೇಕ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮಕ್ಕೆ ಆಗಮಿಸಲಿವೆ. ಈ ತಂಡಗಳ ಉಸ್ತುವಾರಿಯನ್ನು ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ.

ತಾಲ್ಲೂಕು ಮಟ್ಟದ ಜವಾಬ್ದಾರಿ: ಮಾಗಡಿ ತಂಡದ ನೇತೃತ್ವವನ್ನು ಶಾಸಕ ಬಾಲಕೃಷ್ಣ ಹಾಗೂ ಹುಲಿಯೂರುದುರ್ಗ ತಂಡದ ಜವಾಬ್ದಾರಿಯನ್ನು ರಂಗನಾಥ್ ವಹಿಸಿಕೊಳ್ಳಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಕೆ.ಹೆಚ್. ಮುನಿಯಪ್ಪ ಮುನ್ನಡೆಸಲಿದ್ದಾರೆ.

ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪನೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಆವರಣದಲ್ಲಿ ನಾಡಪ್ರಭುವಿನ ಹೆಸರಿನಲ್ಲಿ ನೂತನ ನಗರಾಭಿವೃದ್ಧಿ ಯೋಜನೆ (Town Planning) ಕಾಲೇಜು ನಿರ್ಮಾಣದ ಸಿದ್ಧತೆಗಳು ನಡೆಯುತ್ತಿವೆ.

ಕ್ಷೇತ್ರ ಮತ್ತು ವಾರ್ಡ್ ಮಟ್ಟಕ್ಕೆ ಅನುದಾನ:

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಯಂತಿ ಆಚರಿಸಲು ಸರ್ಕಾರದಿಂದ ತಲಾ 1 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ ಬೆಂಗಳೂರಿನ 369 ವಾರ್ಡ್‌ಗಳಲ್ಲೂ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಲು ಬಿಬಿಎಂಪಿ ವತಿಯಿಂದ ತಲಾ 1 ಲಕ್ಷ ರೂಪಾಯಿ ನೀಡಲಾಗುವುದು. ವಾರ್ಡ್ ಮಟ್ಟದ ಆಚರಣೆಯ ದಿನಾಂಕವನ್ನು ಬೆಂಗಳೂರು ನಗರದ ಸಚಿವರು ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

“ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಥೀಮ್ ಪಾರ್ಕ್ ಪೂರ್ಣಗೊಂಡಿದ್ದು, ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ತಯಾರಿ ಮಾಡಲಾಗುತ್ತಿದೆ.  ಕಾರ್ಯಕ್ರಮಕ್ಕೆ ಗಣ್ಯರು, ಸ್ವಾಮೀಜಿಗಳು ಹಾಗೂ ನಾಯಕರ ಆಹ್ವಾನದ ಜವಾಬ್ದಾರಿಯನ್ನು ಕೃಷ್ಣ ಬೈರೇಗೌಡರು ವಹಿಸಿಕೊಂಡಿದ್ದಾರೆ. ಸಂಘಟನೆಗಳು ಹಾಗೂ ಒಕ್ಕಲಿಗರ ಸಂಘ ತಮ್ಮದೇ ಆದ ಜವಾಬ್ದಾರಿ ಹೊತ್ತುಕೊಂಡಿವೆ. ಈ ಕಾರ್ಯಕ್ರಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಕೆಂಪೇಗೌಡರು ಬೆಂಗಳೂರು ನಗರ ಹಾಗೂ ರಾಜ್ಯದ ಆಸ್ತಿ. ಎಲ್ಲಾ ಧರ್ಮ, ಜಾತಿ, ಸಂಘಟನೆಯವರು ಸೇರಿ ಜಯಂತಿ ಆಚರಿಸಲಾಗುವುದು” ಎಂದು ತಿಳಿಸಿದರು.

ಸಭೆಯಲ್ಲಿ ವ್ಯಕ್ತವಾದ ಸಲಹೆಗಳು:

ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅನೇಕ ಸಲಹೆಗಳು ವ್ಯಕ್ತವಾಗಿದ್ದು, ಕೆಂಪೇಗೌಡ ಸಮಾಧಿ ಸ್ಥಳವನ್ನು 10 ಎಕರೆ ಜಾಗದಲ್ಲಿ ಅಭಿವೃದ್ಧಿ ಪಡಿಸಬೇಕು. ಜೊತೆಗೆ ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದ ಟೆಂಡರ್ ಆಗಿದ್ದು, ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜಿಬಿಎ ವ್ಯಾಪ್ತಿಯಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಬೇಕು ಎಂಬ ವಿಚಾರಗಳು ಚರ್ಚೆಯಾದವು. ಉಳಿದಂತೆ ಬಂದ ಸಲಹೆಗಳು ಹೀಗಿವೆ..

• ನಾಡಪ್ರಭು ಕೆಂಪೇಗೌಡ ಅವರನ್ನು ಬೆಂಗಳೂರಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ

• ಎಲ್ಲಾ ಜಿಲ್ಲೆಗಳಲ್ಲಿ ಕೆಂಪೇಗೌಡ ಜಿಲ್ಲಾ ಭವನ ನಿರ್ಮಾಣ

• ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಉದ್ಯಾನವನ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಭವನ ನಿರ್ಮಾಣ

• ಕೆಂಪೇಗೌಡರ ವಸ್ತುಸಂಗ್ರಹಾಲಯ

• ಕೆಂಪೇಗೌಡರ ಸ್ಮರಣೆಯಲ್ಲಿ ಬೆಂಗಳೂರಿನ ಕೆರೆಗಳ ಶುದ್ಧೀಕರಣ, ಪುನಶ್ಚೇತನ

• ಸ್ವಾಮಿನಾಥನ್ ವರದಿ ಆಧರಿಸಿ ಜಲ ನಿರ್ವಹಣೆ ಬಗ್ಗೆ ಬೆಂಗಳೂರಿಗರಿಗೆ ಜಾಗೃತಿ ಮೂಡಿಸಲು ಕಾರ್ಯಾಗಾರ

• ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ

• ಕೆಂಪೇಗೌಡ ಜಯಂತಿಯಂದು ಸರ್ಕಾರಿ ರಜೆ ಘೋಷಣೆ

• ನಗರದ ನಾಲ್ಕು ದಿಕ್ಕಿನಲ್ಲಿ 50-60 ಅಡಿ ಎತ್ತರದ ಕೆಂಪೇಗೌಡರ ಕಲ್ಲಿನ ಪ್ರತಿಮೆ ನಿರ್ಮಾಣ

• ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವತಿ ಗ್ರಾಮ ಅಭಿವೃದ್ಧಿ


Share this with Friends

Related Post