Wed. Jun 24th, 2026

ದೇವನಹಳ್ಳಿ ಭೂಸ್ವಾಧೀನ: ಎಕರೆಗೆ ₹2.70 ಕೋಟಿ ದಾಖಲೆ ಮೊತ್ತದ ಪರಿಹಾರ ನಿಗದಿ

Share this with Friends

ಬೆಂಗಳೂರು:ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮಗಳಲ್ಲಿ ಕೈಗಾರಿಕಾ ಕಾರಿಡಾರ್ ವಿಸ್ತರಣೆಗಾಗಿ ಭೂಮಿ ನೀಡಲು ಸಮ್ಮತಿಸಿರುವ ರೈತರಿಗೆ ಬಂಪರ್ ಪರಿಹಾರ ಸಿಕ್ಕಿದೆ. ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಒಪ್ಪಿರುವ ಒಟ್ಟು 120 ಎಕರೆ ಜಮೀನಿಗೆ ಪ್ರತಿ ಎಕರೆಗೆ ₹2.70 ಕೋಟಿ ರೂ.ಗಳ ಬೃಹತ್ ಪರಿಹಾರ ಧನವನ್ನು ನಿಗದಿಪಡಿಸಲಾಗಿದೆ. ಭೂದರ ನಿರ್ಧಾರಣಾ ಸಲಹಾ ಸಮಿತಿಯು ಈ ದರವನ್ನು ಅಂತಿಮಗೊಳಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (KIADB) ಅಧಿಕೃತ ಶಿಫಾರಸು ಕಳುಹಿಸಿದೆ.

ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅರವಿಂದ ಭವನದಲ್ಲಿ ನಡೆದ ಜಂಟಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಭೂಮಾಲೀಕರು ಚರ್ಚಿಸಿ ಈ ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದಾರೆ. ಸದ್ಯ ನಿಗದಿಪಡಿಸಲಾಗಿರುವ ಈ ಪರಿಹಾರ ದರವು ದೇವನಹಳ್ಳಿ ಭಾಗದ ಭೂಸ್ವಾಧೀನ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣದ ಬದಲಿಗೆ ಜಾಗ ಪಡೆಯುವ ಬಂಪರ್ ಆಫರ್:

ಸಭೆಯ ನಂತರ ಮಾಹಿತಿ ನೀಡಿರುವ ವಿಶೇಷ ಜಿಲ್ಲಾಧಿಕಾರಿಗಳು, ಈ ದರ ನಿರ್ಧಾರವನ್ನು ಮಂಡಳಿಯ ಅಂತಿಮ ಅನುಮೋದನೆಗಾಗಿ ರವಾನಿಸಲಾಗುವುದು ಎಂದಿದ್ದಾರೆ. ಇದರೊಂದಿಗೆ ರೈತರಿಗೆ ಮತ್ತೊಂದು ಪ್ರಮುಖ ಆಯ್ಕೆಯನ್ನು ನೀಡಲಾಗಿದೆ. ಸ್ವಾಧೀನಪಡಿಸಿಕೊಂಡ ಭೂಮಿಗೆ ನಗದು ರೂಪದಲ್ಲಿ ಪರಿಹಾರ ಪಡೆಯಲು ಇಷ್ಟವಿಲ್ಲದ ಭೂಮಾಲೀಕರು, ಪ್ರತಿ ಎಕರೆ ಕೃಷಿ ಜಮೀನಿಗೆ ಪ್ರತಿಯಾಗಿ ಅದೇ ಕೈಗಾರಿಕಾ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಲಾದ 10,781 ಚದರ ಅಡಿಯ ವಾಣಿಜ್ಯ ಅಥವಾ ಕೈಗಾರಿಕಾ ನಿವೇಶನವನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ದೇವನಹಳ್ಳಿಯಲ್ಲೇ ಗರಿಷ್ಠ ದರ:

ಯಾವುದೇ ಬಲವಂತವಿಲ್ಲದೆ ರೈತರೇ ತಾವಾಗಿಯೇ ಈ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ನೀಡುತ್ತಿದ್ದು, ಜೂನ್ 16ರಂದು ಕೆಐಎಡಿಬಿ ಕಾಯ್ದೆಯ ಅನ್ವಯ ಅಂತಿಮ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ. ಸಂತ್ರಸ್ತ ರೈತ ಕುಟುಂಬಗಳಿಗೆ ಯಾವುದೇ ಅನ್ಯಾಯವಾಗದಂತೆ ಅತ್ಯಂತ ನ್ಯಾಯಯುತ ಹಾಗೂ ಲಾಭದಾಯಕ ಪರಿಹಾರ ಒದಗಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಸೂರಜ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

 


Share this with Friends

Related Post