Thu. Jun 25th, 2026

ಗೃಹಲಕ್ಷ್ಮಿ ವಿವಾದಕ್ಕೆ ಇಲಾಖೆ ಉತ್ತರ: 1.94 ಲಕ್ಷ ಅನರ್ಹರು ಔಟ್; ಮೃತರ ಖಾತೆಗೆ ಹೋಗಿದ್ದ ₹15.24 ಕೋಟಿ ವಾಪಸ್!

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಅನರ್ಹರು ಹಾಗೂ ಮೃತ ಫಲಾನುಭವಿಗಳ ಖಾತೆಗೆ ಧನಸಹಾಯ ಜಮೆಯಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಮತ್ತು ಮಹಾಲೇಖಪಾಲರ (CAG) ಲೆಕ್ಕ ತಪಾಸಣೆ ವರದಿಯ ಆಕ್ಷೇಪಣೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಸ್ಪಷ್ಟೀಕರಣ ನೀಡಿದೆ. ಯೋಜನೆ ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹರಿಗೆ ಯಾವುದೇ ತೊಂದರೆಯಿಲ್ಲದೆ ತಲುಪುತ್ತಿದೆ ಎಂದು ಇಲಾಖೆ ತಿಳಿಸಿದೆ.

ತಂತ್ರಾಂಶದ ಮೂಲಕ ಅನರ್ಹರ ಪತ್ತೆ

ತೆರಿಗೆ ಪಾವತಿದಾರರನ್ನು ಗುರುತಿಸಲು ಇಲಾಖೆಯು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ಒಟ್ಟು 1,94,560 ಮಹಿಳೆಯರನ್ನು ‘ಕುಟುಂಬ’ (Kutumba) ಸಾಫ್ಟ್‌ವೇರ್ ಸಹಾಯದಿಂದ ಪತ್ತೆಹಚ್ಚಲಾಗಿದೆ. ಇವರೆಲ್ಲರನ್ನೂ ಪ್ರತಿ ತಿಂಗಳ ಧನಸಹಾಯ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಮೃತ ಫಲಾನುಭವಿಗಳ ನಿರ್ವಹಣೆ ಮತ್ತು ಮರು ನೋಂದಣಿ

ಯೋಜನೆಯಡಿ ನೋಂದಾಯಿತರಾಗಿದ್ದ ಒಟ್ಟು 2,88,376 ಮಹಿಳೆಯರು ಮರಣ ಹೊಂದಿದ್ದಾರೆ. ಇವರ ವಿವರಗಳನ್ನು ಇ-ಜನ್ಮ (e-janma), ಕುಟುಂಬ ತಂತ್ರಾಂಶ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಮೂಲಕ ಸಕಾಲದಲ್ಲಿ ಪಡೆದು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ವಿಶೇಷವೆಂದರೆ, ಮರಣ ಹೊಂದಿದ ಫಲಾನುಭವಿಗಳ ಪೈಕಿ 1,03,922 ಕುಟುಂಬಗಳು ನಿಯಮಾನುಸಾರ ಪಡಿತರ ಚೀಟಿಯಲ್ಲಿ (Ration Card) ಮನೆಯ ಹೊಸ ಯಜಮಾನಿಯ ಹೆಸರನ್ನು ಬದಲಾಯಿಸಿಕೊಂಡು, ಯೋಜನೆಯಡಿ ಮರು ನೋಂದಣಿ ಮಾಡಿಕೊಂಡು ಧನಸಹಾಯ ಪಡೆಯುತ್ತಿದ್ದಾರೆ.

15.24 ಕೋಟಿ ರೂಪಾಯಿ ವಸೂಲಾತಿ

ಮರಣದ ಮಾಹಿತಿ ಸಕಾಲದಲ್ಲಿ ಸಿಗದ ಕಾರಣ 1,08,755 ಮೃತ ಫಲಾನುಭವಿಗಳ ಖಾತೆಗೆ ಒಟ್ಟು 115 ಕೋಟಿ ರೂಪಾಯಿ ಪಾವತಿಯಾಗಿತ್ತು. ಈ ಕುರಿತು ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿ (SLBC) ಜೊತೆ ಸಭೆ ನಡೆಸಲಾಗಿದ್ದು, ಈಗಾಗಲೇ 15.24 ಕೋಟಿ ರೂಪಾಯಿಗಳನ್ನು ಸರ್ಕಾರದ ಖಾತೆಗೆ ಯಶಸ್ವಿಯಾಗಿ ಮರು ಜಮೆ ಮಾಡಿಕೊಳ್ಳಲಾಗಿದೆ. ಉಳಿದ ಬಾಕಿ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

 


Share this with Friends

Related Post