Fri. Jun 26th, 2026

ಬೆಚ್ಚಿಬೀಳಿಸುತ್ತೆ ಬೆಂಗಳೂರಿನ ಈ ಸಿಸಿಟಿವಿ ದೃಶ್ಯ: ಚಲಿಸುತ್ತಿದ್ದ ಓಮ್ನಿ ವ್ಯಾನ್‌ನಿಂದ ಕೆಳಗೆ ಬಿದ್ದ ಶಾಲಾ ಮಕ್ಕಳು!

Share this with Friends

ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನೇ ಗಾಳಿಗೆ ತೂರಿದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳನ್ನು ತುಂಬಿಕೊಂಡು ಚಲಿಸುತ್ತಿದ್ದ ಖಾಸಗಿ ಓಮ್ನಿ ವ್ಯಾನ್‌ನ ಹಿಂಬದಿಯ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ, ಅದರಲ್ಲಿದ್ದ ಐವರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ಗಾಯತ್ರಿ ಲೇಔಟ್ ರಸ್ತೆಯಲ್ಲಿ ನಡೆದ ಈ ಇಡೀ ಘಟನೆಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಪ್ರಾಣಾಪಾಯ

ಮಧ್ಯಾಹ್ನದ ವೇಳೆ ಶಾಲ ಮುಗಿಸಿ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ವ್ಯಾನ್ ರಸ್ತೆ ಗುಂಡಿಗೆ ಇಳಿದ ರಭಸಕ್ಕೆ ಅಥವಾ ಬಾಗಿಲನ್ನು ಸರಿಯಾಗಿ ಲಾಕ್ ಮಾಡದ ಕಾರಣ ಹಿಂಬದಿಯ ಡೋರ್ ತಾನಾಗಿಯೇ ಓಪನ್ ಆಗಿದೆ. ಈ ವೇಳೆ ಸೀಟಿನಲ್ಲಿದ್ದ ಐವರು ಮಕ್ಕಳು ರಸ್ತೆಗೆ ಉರುಳಿ ಬಿದ್ದಿದ್ದಾರೆ. ಅದೃಷ್ಟವಶಾತ್ ವ್ಯಾನ್‌ನ ಹಿಂಭಾಗದಿಂದ ಯಾವುದೇ ವೇಗದ ವಾಹನಗಳು ಬಾರದ ಕಾರಣ ದೊಡ್ಡ ಮಟ್ಟದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಸಾರ್ವಜನಿಕರ ಆಕ್ರೋಶ, ಪೊಲೀಸರಿಂದ ಕಠಿಣ ಕ್ರಮ

ಮಕ್ಕಳು ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಕೆಳಗೆ ಬಿದ್ದ ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಪೋಷಕರು ಶಾಲಾ ವಾಹನಗಳ ಚಾಲಕರ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸರು, ನಿಯಮ ಉಲ್ಲಂಘಿಸಿದ ವ್ಯಾನ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ವಾಹನವನ್ನು ಜಪ್ತಿ ಮಾಡಿದ್ದಾರೆ.

 

 


Share this with Friends

Related Post