Mon. Dec 23rd, 2024

ಟೆಸ್ಟ್ ಶ್ರೇಯಾಂಕದಲ್ಲಿ ಆರ್.ಅಶ್ವಿನ್ ನಂಬರ್ ಒನ್

R Ashwin
Share this with Friends

ನವದೆಹಲಿ : ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿರುವ ಆರ್ ಅಶ್ವಿನ್ ನಂಬರ್ ಒನ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 10 ಇನ್ನಿಂಗ್ಸ್‌ಗಳಲ್ಲಿ 26 ವಿಕೆಟ್‌ ಉರುಳಿಸಿದ್ದ ಅಶ್ವಿನ್ ಒಂದು ಸ್ಥಾನ ಜಿಗಿದು 870 ರೇಟಿಂಗ್ನೊಂದಿಗೆ ನಂಬರ್ 1 ಸ್ಥಾನಕ್ಕೇರಿದ್ದಾರೆ. ಹೀಗಾಗಿ ಹಿಂದೆ ನಂಬರ್ 1 ಸ್ಥಾನದಲ್ಲಿದ್ದ ಜಸ್ಪ್ರೀತ್ ಬುಮ್ರಾ ಎರಡು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ವಿಶ್ರಾಂತಿ ಪಡೆದಿರುವುದೇ ಬುಮ್ರಾ ನಂಬರ್ 1 ಸ್ಥಾನ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಿಂದ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಅವರು ಸರಣಿಯಲ್ಲಿ ಆಡಿದ 3 ಟೆಸ್ಟ್‌ಗಳಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು. ಅಶ್ವಿನ್ ನಂತರ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭಾರತದ ಜಸ್ಪ್ರೀತ್ ಬುಮ್ರಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಇಬ್ಬರೂ 847 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಶ್ವಿನ್‌ಗಿಂತ 23 ಪಾಯಿಂಟ್‌ಗಳ ಹಿಂದೆ ಇದ್ದಾರೆ.

ಟಾಪ್ 10 ಬೌಲರ್‌ ಗಳ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಅಶ್ವಿನ್ ಮತ್ತು ಬುಮ್ರಾ ಹೊರತುಪಡಿಸಿ, 788 ರೇಟಿಂಗ್ ಅಂಕಗಳೊಂದಿಗೆ 7 ನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಇದ್ದಾರೆ. ದಕ್ಷಿಣ ಆಫ್ರಿಕಾದ ರಬಾಡ ಒಂದು ಸ್ಥಾನ ಕುಸಿದಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 5ನೇ ಸ್ಥಾನದಲ್ಲಿದ್ದಾರೆ.


Share this with Friends

Related Post