Sun. Jun 28th, 2026

ನಮ್ಮ ಬೇರುಗಳೇ ನಮ್ಮನ್ನು ಗುರುತಿಸುತ್ತವೆ: ಮನೆಯಲ್ಲಿ ಯಕ್ಷಗಾನ, ರಾಮ ಭಜನೆ ಆಯೋಜಿಸಿ ನಟ ರಿಷಬ್ ಶೆಟ್ಟಿ ಭಾವುಕ ಪೋಸ್ಟ್

Share this with Friends

ಬೆಂಗಳೂರು: “ನಾವು ನಮ್ಮ ಸಂಸ್ಕೃತಿಯ ಬೇರುಗಳನ್ನು ವ್ಯಾಖ್ಯಾನಿಸುವುದಿಲ್ಲ, ಬದಲಿಗೆ ನಮ್ಮ ಮೂಲ ಬೇರುಗಳೇ ನಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತವೆ” ಎಂದು ನ್ಯಾಷನಲ್ ಅವಾರ್ಡ್ ವಿಜೇತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಕರಾವಳಿಯ ಸೊಗಡನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕ ಕಲೆ ಹಾಗೂ ಭಕ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯ ಸುಂದರ ಕ್ಷಣಗಳ ಚಿತ್ರಗಳನ್ನು ಅವರು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.

ಮನತುಂಬಿದ ಕರಾವಳಿ ಸಂಸ್ಕೃತಿಯ ಆಚರಣೆ

ತಮ್ಮ ನಿವಾಸದಲ್ಲಿ ನಡೆದ ಭಕ್ತಿಪೂರ್ವಕ ರಾಮ ಭಜನೆ ಹಾಗೂ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನದ ಅದ್ಭುತ ಸಂಜೆಯ ನೆನಪುಗಳನ್ನು ರಿಷಬ್ ನೆನೆದಿದ್ದಾರೆ. “ನಾನು ಹುಟ್ಟಿ ಬೆಳೆದು ಬಂದಿರುವ ಶ್ರೀಮಂತ ಸಂಸ್ಕೃತಿಯ ಸಾಂಪ್ರದಾಯಿಕ ಆಚರಣೆಗಳು ನನ್ನ ಸ್ವಗೃಹದಲ್ಲಿ ನಡೆದಾಗ ಮನಸ್ಸು ಸಂಪೂರ್ಣವಾಗಿ ತೃಪ್ತಿಗೊಂಡಿತು. ಇದು ನನ್ನ ಪಾಲಿಗೆ ಅತ್ಯಂತ ಧನ್ಯತೆಯ ಕ್ಷಣ” ಎಂದು ತಮ್ಮ ಮನದಾಳದ ಭಾವನೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ಮತ್ತು ನಿಜ ಜೀವನದಲ್ಲಿ ದೈವಾರಾಧನೆ ಹಾಗೂ ಮಣ್ಣಿನ ಸಂಸ್ಕೃತಿಗೆ ಅಪಾರ ಗೌರವ ನೀಡುವ ರಿಷಬ್, ಈ ಪೋಸ್ಟ್‌ನ ಕೊನೆಯಲ್ಲಿ ‘ಜೈ ಶ್ರೀರಾಮ್’ ಎಂದು ಬರೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರ ಈ ಸಾಂಪ್ರದಾಯಿಕ  ಚಿತ್ರಗಳು ಹಾಗೂ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಮತ್ತು ಸಿನಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 


Share this with Friends

Related Post