ಬೆಂಗಳೂರು, ಮಾ.14: ಬಿಜೆಪಿ ಹೈಕಮಾಂಡ್ ಬೆಂಗಳೂರು ಗ್ರಾಮಾಂತರಕ್ಕೆ ಅಳೆದು ತೂಗಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಆಯ್ಕೆ ಮಾಡಿದೆ. ಟಿಕೆಟ್ ಸಿಕ್ಕ ನಂತರ ಇಂದು ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಡಾ.ಸಿ.ಎನ್. ಮಂಜುನಾಥ್ ನಾನು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಬರುತ್ತಿದ್ದೇನೆ. ನಿಮ್ಮ ಸಹಕಾರ ಇರಲಿ. ಯಾರನ್ನೂ ಸಹ ನಾವು ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ದೇವೇಗೌಡ, ಕುಮಾರಸ್ವಾಮಿ, ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳ ಮೇಲೆ ಚುನಾವಣೆ ಆಗಲಿ ಅನ್ನೋದು ನನ್ನ ಆಸೆ ಎಂದರು.
ಕೆಳದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಏಕೈಕ ಸಂಸದ ಡಿಕೆ ಸುರೇಶ್ ಅವರ ಗೆಲುವಿಗೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಕುಟುಂಬದ ಸದಸ್ಯರೂ ಆಗಿರುವ ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಹೆಚ್ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನರೇಂದ್ರ ಮೋದಿ ಸಾಧನೆಗಳ ಮೇಲೆ ಚುನಾವಣೆ ನಡೆಯಲಿ ಎಂದು ಹೇಳಿದರು.
ನಾನು ಸುಧೀರ್ಘವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದೇನೆ. ನನಗೆ ಸಿಕ್ಕ ಅವಕಾಶದಲ್ಲಿ ಒಂದು ಸರ್ಕಾರಿ ವ್ಯವಸ್ಥೆಯಲ್ಲಿ ಪಂಚತಾರಾ ವ್ಯವಸ್ಥೆ ತಂದಿದ್ದೆವು. ನಾನು ಕೇವಲ ಹೃದ್ರೋಗ ತಜ್ಞನಾಗಿ ಕೆಲಸ ಮಾಡಿಲ್ಲ. ಒಬ್ಬ ವ್ಯವಸ್ಥಾಪಕನಾಗಿ, ಒಬ್ಬ ಇಂಜಿನಿಯರ್ ಆಗಿ, ಒಬ್ಬ ಆಡಳಿತಾಧಿಕಾರಿಯಾಗಿ, ಒಬ್ಬ ಸಾಂತ್ವನ ಹೇಳುವ ಕೌನ್ಸಿಲರ್ ಆಗಿ ಕೆಲಸ ಮಾಡಿದ್ದೇನೆ ಎಂದರು.
ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವ ಕೆಲಸ ಆಗುತ್ತಿದೆ. ಭಾರತ ವಿಶ್ವದಲ್ಲಿ ಬಲಶಾಲಿಯಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಈ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಸಾಧನೆ ಮಾತನಾಡಬೇಕು, ಮಾತು ಸಾಧನೆ ಆಗಬಾರದು ಎಂದರು.