ಬೆಂಗಳೂರು: ರಾಜಧಾನಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯು ಇದೀಗ ತೀವ್ರ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಫುಟ್‌ಪಾತ್ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರೆ, ಇತ್ತ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬೆಂಗಳೂರು ಬಂದ್ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಮಾರ್ಗಗಳನ್ನು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಹಾಗೂ ವಾಹನ ನಿಲುಗಡೆಗೆ ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಪಾದಚಾರಿಗಳ ಹಿತರಕ್ಷಣೆಗಾಗಿ ಶೀಘ್ರದಲ್ಲೇ ಅತ್ಯಂತ ಕಟ್ಟುನಿಟ್ಟಾದ ‘ಹೊಸ ಫುಟ್‌ಪಾತ್ ನೀತಿ’ಯನ್ನು ಜಾರಿಗೆ ತರಲಾಗುವುದು. ಆದರೆ, ಬಡ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದು ಸರ್ಕಾರದ ಉದ್ದೇಶವಲ್ಲ. ನೋಂದಾಯಿತ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಜಾಗಗಳನ್ನು (Designated Vending Zones) ನಿಗದಿಪಡಿಸಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ನಗರದ ಸೌಂದರ್ಯ ಹಾಳುಗೆಡವುತ್ತಿರುವ ಅಕ್ರಮ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದು, ಕಡ್ಡಾಯವಾಗಿ ₹ 50,000 ದಿಂದ ₹ 1 ಲಕ್ಷದವರೆಗೆ ಭಾರಿ ದಂಡ ವಿಧಿಸಲಾಗುವುದು ಎಂದ ಅವರು, ಮುಂಚೆ ಒಪ್ಪಿಗೆ ನೀಡಿ ಈಗ ರಾಜಕೀಯಕ್ಕಾಗಿ ಪ್ರತಿಭಟಿಸುತ್ತಿರುವ ವಿರೋಧ ಪಕ್ಷಗಳ ಇಬ್ಬಂದಿ ನೀತಿಯನ್ನು ಖಂಡಿಸಿದರು.
ಬೆಂಗಳೂರು ಬಂದ್ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್:
ಮತ್ತೊಂದೆಡೆ, ಬಡವರ ಹೊಟ್ಟೆ ತುಂಬಿಸುವ ಬೀದಿ ಬದಿ ವ್ಯಾಪಾರವನ್ನು ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಮುನ್ಸೂಚನೆ ನೀಡದೆ ಬಡ ವ್ಯಾಪಾರಿಗಳ ಅಂಗಡಿಗಳನ್ನು ತರಾತುರಿಯಲ್ಲಿ ಧ್ವಂಸಗೊಳಿಸುತ್ತಿರುವುದು ಖಂಡನೀಯ. ಸರ್ಕಾರ ತಕ್ಷಣವೇ ಈ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಬೀದಿ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸರ್ಕಾರ ತನ್ನ ಪಟ್ಟನ್ನು ಸಡಿಲಿಸದೆ ಬಡವರ ಮೇಲೆ ದೌರ್ಜನ್ಯ ಮುಂದುವರಿಸಿದರೆ, ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಿ ಶೀಘ್ರದಲ್ಲೇ ‘ಬೆಂಗಳೂರು ಬಂದ್’ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ನೇರ ಗಡುವು ನೀಡಿದ್ದಾರೆ.

