Thu. Jul 9th, 2026

HMT ಜಾಗದ ಮೇಲೆ ಭೂಮಾಫಿಯಾ ಕಣ್ಣು, ರಿಯಲ್ ಎಸ್ಟೇಟ್ ದಂಧೆಗೆ ಕಾಂಗ್ರೆಸ್ ಸಾಥ್: ಸಚಿವ ಖಂಡ್ರೆ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ!

Share this with Friends

ಬೆಂಗಳೂರು: ರಾಜಧಾನಿಯ ಹೆಚ್‌.ಎಂ.ಟಿ (HMT) ಉದ್ಯಮಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ನೂರಾರು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದರ ಹಿಂದೆ ಭಾರಿ ರಿಯಲ್ ಎಸ್ಟೇಟ್ ದಂಧೆಯ ಕೈವಾಡ ಅಡಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕಿನ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಇತ್ತೀಚಿನ ನೋಟಿಸ್ ಹಾಗೂ ಸಚಿವ ಈಶ್ವರ ಖಂಡ್ರೆ ಅವರ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹೆಚ್‌ಎಂಟಿ ಉದ್ಯಮ ಮುಚ್ಚಿಸಲು ಹುನ್ನಾರ

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಹೆಚ್.ಎಂ.ಟಿ ಉದ್ಯಮವನ್ನು ನಷ್ಟದಿಂದ ಮುಕ್ತಗೊಳಿಸಿ, ಯುವಕರಿಗೆ ಉದ್ಯೋಗ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶೇಷ ಪುನಶ್ಚೇತನ ಪ್ಯಾಕೇಜ್ ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಯೋಜನೆ ಅಂತಿಮ ಹಂತಕ್ಕೆ ಬಂದಿರುವಾಗಲೇ, ರಾಜ್ಯ ಸರ್ಕಾರವು ಇಲಾಖೆಯ ಮೂಲಕ ಹಠಾತ್‌ ಆಗಿ ಜಾಗ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ. ಇದು ಕೇಂದ್ರದ ಉದ್ಯಮದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಿಗೆ ಹಸ್ತಕ್ಷೇಪ ಮಾಡುವ ದುರುದ್ದೇಶಪೂರಿತ ಕ್ರಮವಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

₹15,000 ಕೋಟಿ ಭೂಮಿ ಲೂಟಿಗೆ ಆಶೀರ್ವಾದ!

ಈಗಾಗಲೇ ಕಾಂಗ್ರೆಸ್ ಸರ್ಕಾರದ ಪ್ರಮುಖರ ಆಶೀರ್ವಾದದಿಂದ ಹೆಚ್‌ಎಂಟಿ ಸಂಸ್ಥೆಗೆ ಸೇರಿದ 175 ಎಕರೆಗೂ ಹೆಚ್ಚು ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾ ಲೂಟಿ ಮಾಡಿದೆ. ಅಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ತಲೆಎತ್ತಿವೆ. ಅಂದು ಮೌನವಾಗಿದ್ದ ಅರಣ್ಯ ಇಲಾಖೆಗೆ ಈಗ ಇದ್ದಕ್ಕಿದ್ದಂತೆ ಪರಿಸರ ಪ್ರೇಮ ಜಾಗೃತವಾಗಿದೆಯೇ? ಸುಮಾರು 430 ಎಕರೆ ವಿಸ್ತೀರ್ಣದ ₹15,000 ಕೋಟಿ ಮೌಲ್ಯದ ಈ ಪ್ರಮುಖ ಭೂಮಿಯನ್ನು ಕಬಳಿಸಲು ಹೊಂಚು ಹಾಕಲಾಗುತ್ತಿದೆ ಎಂದು ಹೆಚ್‌ಡಿಕೆ ಕಿಡಿಕಾರಿದರು.

ಸ್ಥಳಕ್ಕೆ ಬನ್ನಿ ಖಂಡ್ರೆ ಅವರೇ!

ಹೆಚ್ಎಂಟಿ ಜಾಗದಲ್ಲಿ 280 ಎಕರೆ ನೆಡುತೋಪು ಇದೆ ಎಂದು ಖಂಡ್ರೆ ಅವರು ಹೇಳಿದ್ದಾರೆ. ಬನ್ನಿ, ನೆಡುತೋಪು ಎಲ್ಲಿದೆ ಎಂದು ಹೋಗಿ ನೋಡೋಣ. ರಾಜ್ಯದ ಎಲ್ಲಾ ಮಾಧ್ಯಮಗಳನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿಯೇ ವೀಕ್ಷಣೆ ಮಾಡೋಣ. ಅಲ್ಲಿ ಏನಾದರೂ ಹೆಚ್ಎಂಟಿ ದುರ್ಬಳಕೆ ಮಾಡುತ್ತಿದ್ದೀಯಾ ಅಥವಾ ಬೇರೆ ಪಟ್ಟಭದ್ರರು ಅಲ್ಲಿನ ಜಾಗವನ್ನು ಕಬ್ಬಳಿಸಿದ್ದಾರಾ? ಎನ್ನುವುದು ತಿಳಿಯುತ್ತದೆ. ಕಬಳಿಕೆಯಲ್ಲಿ ಯಾರ ಯಾರ ಪಾಲು ಎಷ್ಟು ಇದೆ ಎನ್ನುವುದು ಆಗ ಬಯಲಿಗೆ ಬರುತ್ತದೆ. ಈಗ ರಾಜ್ಯದಲ್ಲಿ ಈಶ್ವರ ಖಂಡ್ರೆ ಅವರ ಪಕ್ಷದ್ದೇ ಸರ್ಕಾರ ಇದೆಯಲ್ಲ, ತನಿಖೆ ಮಾಡಲಿ. ನಮಗೇನು ಆಕ್ಷೇಪ ಇಲ್ಲ. 130 ಎಕರೆ ಪರಭಾರೆ ಮಾಡಿದ್ದೀರಲ್ಲ, ಅದರಿಂದ ಯಾವ ಯಾವ ಕೈ ತನ್ನ ಚಳಕವನ್ನು ತೋರಿಸಿದೆ ಎಂಬುದು ಅಲ್ಲಿಯೇ ಆಚೆಗೆ ಬರುತ್ತದೆ. ಬನ್ನಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡೋಣ ಎಂದು ಕೇಂದ್ರ ಸಚಿವರು ಖಂಡ್ರೆ ಅವರಿಗೆ ಸವಾಲು ಹಾಕಿದರು.

ಮೂರು ವರ್ಷ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಆ ಸಂದರ್ಭದಲ್ಲಿ ಏನು ಕಡೆದು ಕಟ್ಟಿ ಹಾಕಿದ್ದೀರಿ? ನೀವು ಅರಣ್ಯ ಮಂತ್ರಿಯಾಗಿ ಎಷ್ಟು ಅರಣ್ಯ ಭೂಮಿಯನ್ನು ವಾಪಸ್ ಪಡೆದು ಉಳಿಸಿದ್ದೀರಿ? ಕಾನ್ ಕಾರ್ಡ್ ಇಂಡಿಯಾ ಕೇಸ್ ಇನ್ನು ಕೋರ್ಟ್’ನಲ್ಲಿ ನಡೆಯುತ್ತಿದೆ. ಇದು ಗೊತ್ತಿಲ್ಲವಾ ನಿಮಗೆ? ಹೆಚ್ಎಂಟಿ ಒಟ್ಟು ಜಾಗದಲ್ಲಿ ಸ್ವಲ್ಪ ಜಾಗವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊಗೆ ಕೊಡಲಾಗಿದೆ. ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಇಸ್ರೋಗೆ ಜಾಗ ನೀಡಿರುವುದರಲ್ಲಿ ಅರ್ಥವಿದೆ. ರಾಷ್ಟ್ರಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ನಾನು ಸ್ವಾಗತಿಸುತ್ತೇನೆ. ಆದರೆ ಸರ್ಕಾರವೇ ರಿಯಲ್ ಎಸ್ಟೇಟ್ ಮಾಡಲು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಅನಗತ್ಯವಾಗಿ ಹೇಳಿಕೆಗಳನ್ನು ಕೊಡುವುದು ಬೇಡ. ಈ ಬಗ್ಗೆ ಏನೇ ಗೊಂದಲಗಳು ಇದ್ದರೂ ಪರಿಹರಿಸಿಕೊಳ್ಳೋಣ. ದಾಖಲೆಗಳನ್ನು ತೆಗೆದುಕೊಂಡು ನಾನೇ ಬರುತ್ತೇನೆ. ಬನ್ನಿ ಪರಸ್ಪರ ಕುರಿತು ಸಮಸ್ಯೆಯನ್ನು ಬಗೆಹರಿಸೋಣ. ಹಿಂದಿನ ಮುಖ್ಯಮಂತ್ರಿಗೆ ನಾನು ಮನವಿಯನ್ನೂ ಮಾಡಿದ್ದೆ. ನಾನು ರಾಜ್ಯಕ್ಕೆ ಒಳ್ಳೆಯದನ್ನೇ ಮಾಡುವುದಕ್ಕೆ ಹೊರಟಿದ್ದರೆ ರಾಜ್ಯ ಸರ್ಕಾರ ಅಡ್ಡಿ ಮಾಡುವುದು ಬೇಡ. ಮುಕ್ತವಾಗಿ ಬೆಂಬಲ ಕೊಡಿ. ಎಲ್ಲರೂ ಸೇರಿ ಒಟ್ಟಾಗಿ ರಾಜ್ಯಕ್ಕೆ ಅನುಕೂಲ ಆಗುವ ಕೆಲಸಗಳನ್ನು ಮಾಡೋಣ. ಪಕ್ಷದ ಆಂಧ್ರ ಪ್ರದೇಶದ ಅಭಿವೃದ್ಧಿಯನ್ನು ಒಮ್ಮೆ ನೋಡಿ. ₹1,30,000 ಕೋಟಿ ವೆಚ್ಚದಲ್ಲಿ ಆರ್ಸೆಲರ್ ಮಿತ್ತಲ್ ಮತ್ತು ನಿಫಾನ್ ಸ್ಟೀಲ್ ನವರು ಉಕ್ಕು ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಏನಾಗಿದೆ? ಕೇಂದ್ರ ಸರ್ಕಾರ ಕೊಡುತ್ತೇವೆ ಎಂದು ಮುಂದೆ ಬಂದರೂ ಇವರು ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

 


Share this with Friends

Related Post