ಬೆಂಗಳೂರು,ಮಾ.15- ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರ ದೂರಿನ ಆಧಾರದ ಮೇಲೆ ಬಿಜೆಪಿಯ ಹಿರಿಯ ನಾಯಕ ಮತ್ತು ಕರ್ನಾಟಕದ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಫೆಬ್ರವರಿ 2 ರಂದು ನಡೆದ ಸಭೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲ ಆರೋಪಿಸಿದ್ದಾರೆ.ಪೊಲೀಸರ ಪ್ರಕಾರ, ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 8 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯಡಿಯೂರಪ್ಪ ಅವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ :
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಹಿಳೆಯೊಬ್ಬರ ಮೇಲಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ಮತ್ತು ಗಂಭೀರ ಪ್ರಕರಣ. ವಿಚಾರಣೆ ನಡೆಯದೆ, ಸತ್ಯಾಸತ್ಯ ತಿಳಿಯದೆ ಅಸ್ಪಷ್ಟ ಮಾಹಿತಿ ನೀಡುವುದು ಸರಿಯಲ್ಲ ಎಂದು ಹೇಳಿದರು.
ಮಹಿಳೆ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಟೈಪ್ ಮಾಡಿ, ಸಹಿ ಹಾಕಿದ ದೂರನ್ನು ನೀಡಲಾಗಿದೆ. ಅದು ಕೈಬರಹದಲ್ಲಿಲ್ಲ ಎಂದು ಹೇಳಿದರು.
ಒಂದು ಕಡೆ ಇದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಗರಿಕರಿಗೆ ಸೇರಿದ ಪ್ರಕರಣ, ಮತ್ತೊಂದು ಕಡೆ ಮಹಿಳೆಯ ಆಪಾದನೆ. ಹೀಗಾಗಿ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪ್ರಕರಣವನ್ನು ನೋಡಬೇಕಿದೆ. ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಾಥಮಿಕವಾಗಿ ಸತ್ಯಾಂಶ ಕಂಡುಬಂದರೆ ಪ್ರತಿವಾದಿಯನ್ನು ವಶಕ್ಕೆ ಪಡೆಯುವುದು ಸೇರಿದಂತೆ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳುತ್ತಾರೆ.
ಪ್ರತಿಪಾದಿವಾದಿಯಿಂದ ದೂರುದಾರರಿಗೆ ಅಪಾಯವಿದೆ ಎಂದಾದರೆ ರಕ್ಷಣೆ ನೀಡುವುದೂ ಪೊಲೀಸರ ಜವಾಬ್ದಾರಿ. ಇಂತಹ ಪ್ರಕರಣದಲ್ಲಿ ಯಾರ ಸೂಚನೆಯೂ ಇಲ್ಲದೆ ಪೊಲೀಸರು ಮಹಿಳೆಯರಿಗೆ ರಕ್ಷಣೆ ನೀಡುವುದು ಸಾಮಾನ್ಯಎಂದರು. ತನಿಖೆಯ ವೇಳೆ ಎಲ್ಲಾ ಸತ್ಯಾಂಶಗಳು ಹೊರಬರುತ್ತವೆ. ದೂರಿನ ಹಿಂದಿರುವ ಉದ್ದೇಶ ಮತ್ತು ದುರುದ್ದೇಶದ ಕುರಿತು ಪರಿಶೀಲಿಸಲಾಗುತ್ತದೆ ಎಂದ ಅವರು, ಈ ಪ್ರಕರಣದಲ್ಲಿ ರಾಜಕಾರಣ ಇಲ್ಲ.
ನಾನಾಗಲೀ, ಮುಖ್ಯಮಂತ್ರಿಯಾಗಲೀ, ಉಪಮುಖ್ಯಮಂತ್ರಿಯಾಗಲೀ ರಾಜಕಾರಣ ಮಾಡುವ ಆಸಕ್ತಿ ಹೊಂದಿಲ್ಲ. ಮಹಿಳೆ ದೂರು ಕೊಟ್ಟಾದ ಅದನ್ನು ದಾಖಲಿಸಬೇಕಾಗುತ್ತದೆ. ಪೊಲೀಸರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಿದ್ದಾರೆ ಎಂದು ಸ್ಪಷ್ಪಪಡಿಸಿದರು.