Thu. Jul 16th, 2026

ಅಧಿಕಾರ ಸಿಕ್ಕಾಗ ಅಹಂಕಾರ ಸಲ್ಲದು: ಮುಖ್ಯಮಂತ್ರಿ ಹೇಳಿಕೆಗೆ ಶಾಸಕ ಯತ್ನಾಳ್ ತಿರುಗೇಟು!

Share this with Friends

ಬೆಂಗಳೂರು: “ಸಂವಿಧಾನ ಮತ್ತು ಕಾನೂನು ವ್ಯವಸ್ಥೆ ಎಲ್ಲರಿಗೂ ಒಂದೇ ಆಗಿರುತ್ತದೆ. ತಪ್ಪು ಮಾಡಿದವರು ಯಾರೇ ಆದರೂ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೊಸದಾಗಿ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇತ್ತೀಚಿನ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, “ನಾನು ಈ ಉನ್ನತ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ವಿರೋಧ ಪಕ್ಷದ ಕೆಲವು ನಾಯಕರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಕೀಯ ದ್ವೇಷದ ಕಾರಣಕ್ಕಾಗಿ ನನ್ನನ್ನು ಜೈಲಿಗೆ ತಳ್ಳಲು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ” ಎಂದು ಪ್ರತಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ ಆದರೆ ಇದು ಕೇವಲ ಸಾರ್ವಜನಿಕರ ಅನುಕಂಪ ಗಿಟ್ಟಿಸುವ ತಂತ್ರವಾಗಿದೆ. “ರಾಜ್ಯದಲ್ಲಿ ತನಿಖಾ ಸಂಸ್ಥೆಗಳು ಯಾವುದೇ ವ್ಯಕ್ತಿಯ ಮುಖ ನೋಡಿ ಕೆಲಸ ಮಾಡುವುದಿಲ್ಲ. ತನಿಖೆಗಳು ನಿಯಮಾನುಸಾರವೇ ನಡೆಯುತ್ತವೆ. ಜೈಲಿಗೆ ಕಳುಹಿಸುವ ಸಂಚು ನಡೆಯುತ್ತಿದೆ ಎಂದು ಹೇಳುತ್ತಿರುವುದು ಕೇವಲ ಜನರ ಮಧ್ಯೆ ಅನುಕಂಪ ಗಿಟ್ಟಿಸಿಕೊಳ್ಳುವ ರಾಜಕೀಯ ನಾಟಕ” ಎಂದು ಲೇವಡಿ ಮಾಡಿದ್ದಾರೆ. ಅಕ್ರಮಗಳು ನಡೆದಿದ್ದರೆ ತನಿಖೆಯ ಎದುರಿಸಲು ಹಿಂಜರಿಯಬಾರದು ಎಂದು ಸವಾಲು ಹಾಕಿದರು.

ಬುರುಡೆ ಪ್ರಕರಣದ ಎಸ್‌ಐಟಿ ವರದಿ, ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಬಯಲಾಗಿದೆ:

“ಪವಿತ್ರ ಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಕುಟುಂಬದ ವಿರುದ್ಧ ವ್ಯವಸ್ಥಿತವಾಗಿ ನಡೆದಿದ್ದ ದೊಡ್ಡ ಮಟ್ಟದ ಬುರುಡೆ ಪ್ರಕರಣದ ಷಡ್ಯಂತ್ರವು ಈಗ ವಿಶೇಷ ತನಿಖಾ ದಳದ (ಎಸ್‌ಐಟಿ) ವರದಿಯಿಂದ ಸಂಪೂರ್ಣವಾಗಿ ಬಯಲಾಗಿದೆ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಘನತೆಗೆ ಕಪ್ಪುಚುಕ್ಕೆ ತರಲು ನಡೆದಿದ್ದ ಸುಳ್ಳು ಆರೋಪಗಳ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ, ಇತ್ತೀಚೆಗೆ ತನ್ನ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಕ್ಷೇತ್ರದ ವಿರುದ್ಧ ಮಾಡಲಾಗಿದ್ದ ಆರೋಪಗಳು ಸತ್ಯಕ್ಕೆ ದೂರವಾದವು ಮತ್ತು ಕೇವಲ ಬುರುಡೆ (ಸುಳ್ಳು) ಕಥೆಗಳು ಎಂಬಂಶ ಉಲ್ಲೇಖವಾಗಿದೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಯತ್ನಾಳ್ ಅವರು ತೀವ್ರವಾಗಿ ರಿಯಾಕ್ಷನ್ ನೀಡಿದ್ದಾರೆ.

ಸನಾತನ ಧರ್ಮದ ಮೇಲಿನ ದಾಳಿಗೆ ಹಿನ್ನಡೆ

“ಧರ್ಮಸ್ಥಳ ಎನ್ನುವುದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರ ಮತ್ತು ಧರ್ಮದ ನೆಲೆವೀಡು. ಅಂತಹ ಪವಿತ್ರ ಕ್ಷೇತ್ರ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಕಥೆಗಳನ್ನು ಕಟ್ಟಿ ತೇಜೋವಧೆ ಮಾಡಲು ಯತ್ನಿಸಿದ್ದವು. ಧರ್ಮದ ಹೆಸರಿನಲ್ಲಿ ಬದುಕುವವರನ್ನು ದಮನ ಮಾಡಲು ನಡೆಸಿದ ಈ ಕುತಂತ್ರಕ್ಕೆ ಈಗ ಕಾನೂನಿನ ಮೂಲಕವೇ ತಕ್ಕ ಉತ್ತರ ಸಿಕ್ಕಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ ಎನ್ನುವುದು ಈ ವರದಿಯಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಭಕ್ತ ವಲಯದಲ್ಲಿ ಹರ್ಷ, ರಾಜಕೀಯ ಸಂಚಲನ

ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೀಡಿರುವ ಈ ಮಹತ್ವದ ವರದಿಯು ಕರಾವಳಿ ಭಾಗ ಸೇರಿದಂತೆ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಸುಳ್ಳು ಆರೋಪಗಳ ಮೂಲಕ ಸಾರ್ವಜನಿಕರನ್ನು ಹಾದಿ ತಪ್ಪಿಸಲು ಯತ್ನಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಮತ್ತು ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ. ಇದರ ನಡುವೆ ಯತ್ನಾಳ್ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲೂ ಹೊಸ ಚರ್ಚೆಗೆ ಗ್ರಾಸವಾಗಿದೆ.

 

 


Share this with Friends

Related Post