Fri. Nov 1st, 2024

ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ:ರಾಜೀವ್ ಕುಮಾರ್

Share this with Friends

ನವದೆಹಲಿ,ಮಾ.16: ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು,
ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ,10.5 ಲಕ್ಷ ಮತದಾನ ಕೇಂದ್ರಗಳು ಇದ್ದು, ಚುನಾವಣಾ ಕರ್ತವ್ಯಕ್ಕೆ ಒಂದೂವರೆ ಕೋಟಿ ಸಿಬ್ಬಂದಿ ಬಳಕೆ ಮಾಡಲಾಗುವುದು. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ.

ದೇಶದಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ,19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.12 ರಾಜ್ಯಗಳಲ್ಲಿ ಪುರುಷ ಮತದಾರಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಮತದಾರರ ದಿಕ್ಕು ತಪ್ಪಿಸಬಾರದು ಹಾಗಾಗಿ
ಸಾಮಾಜಿಕ ಜಾಲತಾಣಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಎಂದು ತಿಳಿಸಿದರು.

ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್​ಡೆಸ್ಕ್​, ವಿದ್ಯುತ್​ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. 85 ವರ್ಷ ಮೇಲ್ಪಟ್ಟವರಿಗೆ ಹಾಗೂ ಶೇ.40 ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ವ್ಹೀಲ್​ಚೇರ್ ವ್ಯವಸ್ಥೆ ಇರಲಿದ್ದು​, ಸ್ವಯಂಸೇವಕರೂ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಇದ್ದರೆ ಮಾಹಿತಿ ನೀಡಿ, ಸ್ಥಳಿಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು ಎಂದು ರಾಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಆ್ಯಪ್ ಮೂಲಕ ತಮ್ಮ ಅಭ್ಯರ್ಥಿಗಳ ಮಾಹಿತಿ ಲಭ್ಯ ಇರಲಿದೆ. ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಆ್ಯಪ್ ​ನಲ್ಲಿರಲಿದೆ. ಆ್ಯಪ್ ಮೂಲಕ ಅಕ್ರಮದ ಫೋಟೋ, ವಿಡಿಯೋ ಅಪ್ಲೋಡ್ ಮಾಡಬಹುದು. ಕೂಡಲೇ ಅಕ್ರಮ ಎಸಗುವ ಅಭ್ಯರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

ಎಲ್ಲಾ ಕಡೆ ಚೆಕ್​ಪೋಸ್ಟ್ ಇರಲಿವೆ, ಡ್ರೋನ್​ ಮೂಲಕ ಕಣ್ಗಾವಲು ಇರಿಸಲಾಗುವುದು. 24 ಗಂಟೆಗಳ ಕಂಟ್ರೋಲ್ ರೂಂಗಳು ಕರ್ತವ್ಯ ನಿರ್ವಹಿಸಲಿವೆ. ಸಿಆರ್​ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುವುದು. ರೌಡಿಶೀಟರ್​ಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಂತರಾಷ್ಟ್ರೀಯ ಗಡಿಯಲ್ಲೂ ಡ್ರೋಣ್ ಮೂಲಕ ಕಣ್ಗಾವಲು ಇರಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.


Share this with Friends

Related Post