ಬೆಂಗಳೂರು, ಮಾ.17: ನಮ್ಮ ಪಕ್ಷದಿಂದ ಚುನಾವಣೆಯ ಪ್ರಚಾರ ಜೋರಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಕಾಣೆಯಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಸಚಿವರು ಸ್ಪರ್ಧಿಸುವ ನಿರೀಕ್ಷೆ ಇದ್ದರೂ, ಈಗ ಎಲ್ಲರೂ ಕಾಣೆಯಾಗಿದ್ದಾರೆ ಎಂದು ವ್ಯಂಗ್ಯ ವಾಡಿದರು.
ಸಚಿವರು ಬೆಂಗಳೂರಿನಲ್ಲಿರದೆ ಹಳ್ಳಿಗಳಿಗೆ ಓಡಿಹೋಗಿದ್ದಾರೆ,ಪ್ರಧಾನಿ ನರೇಂದ್ರ ಮೋದಿಯವರ ಅಲೆ ಇರುವುದರಿಂದ ಕಾಂಗ್ರೆಸ್ ಸಚಿವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯ ಬರುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಗೆಲ್ಲಲಿದೆ ಎನ್ನುವುದು ಚುನಾವಣಾ ಸಮೀಕ್ಷೆಯಲ್ಲೂ ಗೊತ್ತಾಗಿದೆ, ಜೆಡಿಎಸ್ ಮೈತ್ರಿಯ ಜೊತೆಗೆ 28 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯನಿರ್ವಹಿಸಲಾಗುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 4 ಲಕ್ಷದ ಅಂತರ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ,ಆದರೆ ಕಾಂಗ್ರೆಸ್ ಆರಂಭದಲ್ಲೇ ಎಡವಿದೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಮನ ಒಲಿಸುವ ಕೆಲಸವನ್ನು ನಾನೂ ಮಾಡುತ್ತೇನೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ನಡುವಿನ ಮಾತುಕತೆಯ ಸಮಸ್ಯೆ ಅವರ ನಡುವೆಯೇ ಬಗೆಹರಿಯಬೇಕು ಎಂದು ಅಶೋಕ್ ತಿಳಿಸಿದರು.