ಬೆಂಗಳೂರು: ರಾಜಧಾನಿ ಹೊರವಲಯದ ಪ್ರಸ್ತಾವಿತ ಬಿಡದಿ ಸ್ಮಾರ್ಟ್ ಟೌನ್ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಕೇಳಿಬರುತ್ತಿರುವ ವಿಭಿನ್ನ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ತಣ್ಣಗಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಸಮಿತಿಯಲ್ಲಿರುವ ನಿವೃತ್ತ ಹಿರಿಯ ಅಧಿಕಾರಿಗಳು:
ಯೋಜನೆಯನ್ನು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಚೌಕಟ್ಟಿನಲ್ಲಿ ವಿಶ್ಲೇಷಿಸಲು ಸಮಿತಿಗೆ ನಿವೃತ್ತ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಅವರು ಈ ಸಮಿತಿಯ ಪ್ರಮುಖ ಸದಸ್ಯರಾಗಿದ್ದಾರೆ. ಈ ಸಮಿತಿಯು ಮುಂದಿನ 30 ದಿನಗಳ ಒಳಗಾಗಿ ತನ್ನ ಸಮಗ್ರ ವರದಿ ಹಾಗೂ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ.
ಬಲವಂತದ ಭೂಸ್ವಾಧೀನ ಇಲ್ಲ:
ಯೋಜನೆಗಾಗಿ ರೈತರ ಜಮೀನನ್ನು ಕಬಳಿಸಲಾಗುತ್ತಿದೆ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಗಳು, ಈ ಯೋಜನೆಗೆ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ನೂತನ ಸಮಿತಿಯು ಮಾನವೀಯತೆ, ಕಾನೂನಿನ ಚೌಕಟ್ಟು ಹಾಗೂ ನಗರಾಭಿವೃದ್ಧಿಯ ದೃಷ್ಟಿಕೋನದಿಂದ ಯೋಜನೆಯನ್ನು ಪರಾಮರ್ಶಿಸಲಿದೆ. ಕನಿಷ್ಠ ಜನವಸತಿ ಸ್ಥಳಾಂತರ ಮತ್ತು ಜಮೀನು ಮಾಲೀಕರಿಗೆ ಗರಿಷ್ಠ ಮೌಲ್ಯವನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
2006ರ ಯೋಜನೆಗೆ ಮರುಜೀವ:
ನಿಜವಾಗಿ ಬಿಡದಿ ಬಳಿ ಸಮಗ್ರ ಉಪನಗರವನ್ನು ಅಭಿವೃದ್ಧಿಪಡಿಸಲು ಮೊದಲ ಬಾರಿಗೆ 2006 ರಲ್ಲೇ ತೀರ್ಮಾನಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಇದು ನನೆಗುದಿಗೆ ಬಿದ್ದಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಕೈಗಾರಿಕಾ ಮತ್ತು ವಾಣಿಜ್ಯ ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಹಳೆಯ ಯೋಜನೆಯನ್ನು ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’ ಹೆಸರಿನಡಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ ನೀಡಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸುವುದು ಸರ್ಕಾರದ ಆಶಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

