Sun. Aug 9th, 2026

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಚಳುವಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ

Share this with Friends

ಬೆಂಗಳೂರು: ದೇಶದಲ್ಲಿ ವ್ಯಾಪಕವಾಗಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಿ ‘ಕ್ವಿಟ್ ವೋಟ್ ಚೋರಿ’ (ಮತಗಳ್ಳತನ ಬಿಟ್ಟು ತೊಲಗಿ) ಆಂದೋಲನವನ್ನು ಆರಂಭಿಸಬೇಕಾದ ಅನಿವಾರ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯ ‘ಭಾರತ ಜೋಡೋ ಭವನ’ದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಎಲ್‌ಎ-2 (ಬೂತ್ ಮಟ್ಟದ ಏಜೆಂಟರು) ಅಧಿಕಾರಿಗಳು ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಮತದಾರರ ಪಟ್ಟಿ ಪರಿಶೀಲನೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ವ್ಯವಸ್ಥಿತವಾಗಿ ಸುಮಾರು ಒಂದು ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು (ಡಿಲೀಟ್ ಮಾಡಲು) ಪಿತೂರಿ ನಡೆಯುತ್ತಿದೆ. ಬದುಕಿನ ರಕ್ಷಣೆಗಾಗಿ ಮೊದಲು ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಮತದಾನದ ಹಕ್ಕೇ ಇಲ್ಲದಿದ್ದರೆ ಇಂತಹ ಯೋಜನೆಗಳ ಪ್ರಯೋಜನವನ್ನು ಪಡೆಯುವುದು ಕಷ್ಟವಾಗುತ್ತದೆ. ಬಿಹಾರದಲ್ಲಿ ಈಗಾಗಲೇ ಮತದಾನದ ಹಕ್ಕು ಹೊಂದಿರುವವರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೀಗಾಗಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ‘ಫಾರಂ 6’ ಭರ್ತಿ ಮಾಡುವ ಮೂಲಕ ಮತದಾನದ ಹಕ್ಕು ಪಡೆಯುವಂತೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡುವುದು ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಲು ಪೂರಕ ಹೆಜ್ಜೆಯಾಗಲಿದೆ ಎಂದರು.

ಹಿಂದೆ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರು ಮತದಾನದ ವಯೋಮಿತಿಯನ್ನು 18 ವರ್ಷಕ್ಕೆ ಇಳಿಸಿದಾಗ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಆದರೆ, 10ನೇ ತರಗತಿ ಪಾಸಾದ ಯುವಕನಿಗೆ ದೇಶ ಕಾಯುವ ಸೈನಿಕನಾಗುವ ಅರ್ಹತೆ ಇರುವಾಗ, ದೇಶವನ್ನು ಮುನ್ನಡೆಸುವ ನಾಯಕನನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನು ಏಕೆ ನೀಡಬಾರದು ಎಂದು ರಾಜೀವ್ ಗಾಂಧಿ ಅವರು ಅಂದು ವಿರೋಧಿಗಳ ಬಾಯಿ ಮುಚ್ಚಿಸಿದ್ದರು ಎಂದು ಸಿಎಂ ಡಿ.ಕೆ. ಶಿವಕುಮಾರ್ ನೆನಪಿಸಿಕೊಂಡರು.

 

 

 


Share this with Friends

Related Post