ರಾಮನಗರ: ರಾಜ್ಯ ಸರ್ಕಾರದ ಪ್ರಸ್ತಾಪಿತ ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ನೇತೃತ್ವದಲ್ಲಿ ಬಿಡದಿಯಲ್ಲಿ ಇಂದು ಭಾರಿ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.
ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, “ಸ್ಮಾರ್ಟ್ ಟೌನ್‌ಶಿಪ್ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ಇದು ಅಭಿವೃದ್ಧಿ ಯೋಜನೆಯಲ್ಲ, ಬದಲಿಗೆ ಆಡಳಿತ ಪಕ್ಷದ ನಾಯಕರ ರಿಯಲ್ ಎಸ್ಟೇಟ್ ದಂಧೆಗೆ ಮಾಡಿಕೊಂಡಿರುವ ಹಾದಿಯಾಗಿದೆ. ಹಸಿರು ಭೂಮಿಯನ್ನು ಕಾಂಕ್ರೀಟ್ ಕಾಡನ್ನಾಗಿ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಬಿಡದಿ ಭಾಗದ ಒಬ್ಬನೇ ಒಬ್ಬ ರೈತನನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ. ಈ ಭೂಮಿ ರೈತರ ಜೀವನಾಡಿ, ಇದರ ರಕ್ಷಣೆಗೆ ನಾವು ಪ್ರಾಣ ಕೊಡಲೂ ಸಿದ್ಧ,” ಎಂದು ಎಚ್ಚರಿಸಿದರು.
ಇದು ಸಿದ್ದರಾಮಯ್ಯ ಸರ್ಕಾರದ ‘ಲ್ಯಾಂಡ್ ಗ್ರಾಬಿಂಗ್’ ಯೋಜನೆ: ಆರ್. ಅಶೋಕ್
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇವಲ ಲೂಟಿ ಹೊಡೆಯುವ ಕೆಲಸ ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಬಿಡದಿ ಟೌನ್‌ಶಿಪ್ ಯೋಜನೆ ಎನ್ನುವುದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಯ ಮತ್ತೊಂದು ‘ಲ್ಯಾಂಡ್ ಗ್ರಾಬಿಂಗ್’ (ಭೂಹಗರಣ) ತಂತ್ರವಾಗಿದೆ. ಈಗಾಗಲೇ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳಲ್ಲಿ ಮುಳುಗಿರುವ ಸರ್ಕಾರ, ಈಗ ಕಣ್ಣಿಟ್ಟಿರುವುದು ಬೆಂಗಳೂರು ಗ್ರಾಮಾಂತರದ ರೈತರ ಜಮೀನಿನ ಮೇಲೆ. ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿದರೆ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು. ಮುಂಬರುವ ಆಗಸ್ಟ್ 13ರ ವಿಧಾನಸಭೆ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದ ಬೆವರಿಳಿಸುತ್ತೇವೆ,” ಎಂದು ಗುಡುಗಿದರು.
ಪಾದಯಾತ್ರೆಯಲ್ಲಿ ಮೈತ್ರಿಕೂಟದ ಪ್ರಮುಖ ನಾಯಕರು, ಸ್ಥಳೀಯ ಶಾಸಕರು ಹಾಗೂ ನೂರಾರು ರೈತ ಮುಖಂಡರು ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

