Sun. Aug 9th, 2026

ಖಾತೆ ಹಂಚಿಕೆ ಕಸರತ್ತು: ದೆಹಲಿಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಪ್ರಯಾಣ!

Share this with Friends

ಬೆಂಗಳೂರು: ರಾಜ್ಯ ಸಚಿವ ಸಂಪುಟದ 19 ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಪ್ರಭಾವಿ ಖಾತೆಗಳಿಗಾಗಿ ಪಕ್ಷದ ಹಿರಿಯ ನಾಯಕರ ವಲಯದಲ್ಲಿ ತೀವ್ರ ಅಸಮಾಧಾನ ಹಾಗೂ ಭಿನ್ನಮತ ಭುಗಿಲೆದ್ದಿರುವ ಬೆನ್ನಲ್ಲೇ, ಈ ಹೈಕಮಾಂಡ್ ಕಸರತ್ತನ್ನು ಇತ್ಯರ್ಥಪಡಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ರಾತ್ರಿ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಆಗಸ್ಟ್ 13ರಿಂದ ಮಳೆಗಾಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಹೊಸ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲು ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಮುದ್ರೆ ಒತ್ತಿಸಲು ಸಿಎಂ ಮುಂದಾಗಿದ್ದಾರೆ.

ಖಾತೆ ಹಂಚಿಕೆ ವಿಳಂಬ; 

ರಾಜ್ಯದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಹಲವು ದಿನಗಳು ಕಳೆದರೂ ಖಾತೆ ಹಂಚಿಕೆ ವಿಳಂಬವಾಗಿರುವುದು ವಿರೋಧ ಪಕ್ಷಗಳ ಟೀಕೆಗೆ ಮಾತ್ರವಲ್ಲದೆ, ಸ್ವಪಕ್ಷದ ಶಾಸಕರ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ. ಪ್ರಭಾವಿ ಇಲಾಖೆಗಳಿಗಾಗಿ ಸಚಿವರ ವಲಯದಲ್ಲಿ ಭಾರೀ ಪೈಪೋಟಿ ನಡೆದಿದ್ದು, ಹಿರಿಯ ಶಾಸಕರು ತಮಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಬಹಿರಂಗವಾಗಿಯೇ ಮುನಿಸು ವ್ಯಕ್ತಪಡಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರ ನಿವಾಸಕ್ಕೆ ಸಿಎಂ ಭೇಟಿ ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದ ಬೆನ್ನಲ್ಲೇ, ಮತ್ತೊಂದೆಡೆ ಹಲವು ಆಕಾಂಕ್ಷಿ ಶಾಸಕರು ತಮ್ಮದೇ ಆದ ಜಂಟಿ ಸಭೆಗಳನ್ನು ನಡೆಸಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಆಂತರಿಕ ಭಿನ್ನಮತವು ಅಧಿವೇಶನದ ಮುನ್ನ ಸರ್ಕಾರಕ್ಕೆ ಭಾರಿ ಮುಜುಗರ ತಂದಿಟ್ಟಿದೆ.

ವರಿಷ್ಠರ ಅಂಗಳಕ್ಕೆ ಸೇರಿದ ಭಿನ್ನಮತದ ಬಿಸಿ (ಸಂಭಾವ್ಯ ಪಟ್ಟಿ):

ಅಧಿವೇಶನ ಆರಂಭಕ್ಕೆ ಇನ್ನು ಎರಡೇ ದಿನಗಳು ಬಾಕಿ ಇರುವುದರಿಂದ, ಶಾಸಕರ ಈ ಆಕ್ರೋಶ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಪಟ್ಟಿಯನ್ನು ಅಂತಿಮಗೊಳಿಸಲು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಪ್ರಮುಖರನ್ನು ಭೇಟಿಯಾಗಲು ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಕೈ ಪಾಳಯದ ಆಂತರಿಕ ಮೂಲಗಳ ಪ್ರಕಾರ, ಹಿರಿಯ ಮತ್ತು ಕಿರಿಯ ನಾಯಕರ ಹಿರಿತನ ಹಾಗೂ ಜಾತಿ ಸಮೀಕರಣವನ್ನು ಆಧರಿಸಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಡಾ. ಯತೀಂದ್ರ ಸಿದ್ದರಾಮಯ್ಯ: ಸಚಿವರಾಗಿರುವ ಇವರಿಗೆ  ಪರಿಷತ್ ಸಭಾ ನಾಯಕನ ಹೊಣೆಯೂ ಸಿಗಲಿದೆ.ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಯಲಿದೆ.

ದಿನೇಶ್ ಗುಂಡೂರಾವ್ ಅಸಮಾಧಾನ ಶಮನ: ಈಗಾಗಲೇ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿರುವ ದಿನೇಶ್ ಗುಂಡೂರಾವ್ ಅವರ ಮುನಿಸು ತಣಿಸಲು, ದೆಹಲಿ ವರಿಷ್ಠರ ಸೂಚನೆ ಮೇರೆಗೆ ಅವರಿಗೆ ನಿಗಮ ಮಂಡಳಿಯ ಕ್ಯಾಬಿನೆಟ್ ದರ್ಜೆಯ ಪ್ರಮುಖ ಹೊಣೆ ಅಥವಾ ಅತ್ಯುನ್ನತ ರಾಜಕೀಯ ಜವಾಬ್ದಾರಿಯ ಕೊಡುಗೆ ಸಿಗುವ ಮುನ್ಸೂಚನೆ ಇದೆ.

ಹಿರಿಯ ಶಾಸಕರಿಗೆ ಒಲಿಯಲಿರುವ ಪ್ರಮುಖ ಇಲಾಖೆಗಳು: ಅಸಮಾಧಾನಗೊಂಡಿರುವ ಶಾಸಕರನ್ನು ತಣ್ಣಗಾಗಿಸಲು ಇರುವ ಅವಕಾಶಗಳ ಬಳಸಿಕೊಳ್ಳಲು ಪ್ರಯತ್ನ ನಡೆಸಲು ಸಿಎಂ ಅವಕಾಶ ಕೋರಲಿದ್ದಾರೆ.

ದೆಹಲಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ನಡೆಯಲಿರುವ ಹೈಕಮಾಂಡ್ ನಾಯಕರೊಂದಿಗಿನ ಸಭೆಯ ಬಳಿಕ ಅಧಿಕೃತ ಖಾತೆ ಹಂಚಿಕೆ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

 

 


Share this with Friends

Related Post