Mon. Aug 10th, 2026

ಹುಮನಾಬಾದ್ ಜಲಮೂಲ ಮಾಲಿನ್ಯ: ಮೂರು ಪ್ರಮುಖ ಕೈಗಾರಿಕೆಗಳನ್ನು ತಕ್ಷಣ ಮುಚ್ಚಲು ಸಚಿವ ಈಶ್ವರ ಖಂಡ್ರೆ ಆದೇಶ

Share this with Friends

ಹುಮನಾಬಾದ್: ಮಾಣಿಕನಗರ್ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದ ಕೈಗಾರಿಕೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಗುರುಗಂಗಾ ಮತ್ತು ಮಾಂಜ್ರಾ ನದಿ ಸೇರಿದಂತೆ ಮಾಣಿಕನಗರದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯವನ್ನು ಕಾನೂನುಬಾಹಿರವಾಗಿ ಹರಿಸುತ್ತಿದ್ದ ಹುಮನಾಬಾದ್ ಕೈಗಾರಿಕಾ ಪ್ರದೇಶದ ಮೂರು ಪ್ರಮುಖ ಉದ್ದಿಮೆಗಳನ್ನು ತಕ್ಷಣವೇ ಮುಚ್ಚಲು ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದಾರೆ.

ಸಚಿವರ ಕಠಿಣ ಆದೇಶದ ಬೆನ್ನಲ್ಲೇ 6H ಇಂಡಸ್ಟ್ರೀಸ್, ಸತ್ಯದೀಪ್ತ ಕೆ. ಇಂಡಸ್ಟ್ರೀ, ಮತ್ತು ಹಿಮಾಲಯ ಇಂಡಸ್ಟ್ರೀಸ್ ಸಂಸ್ಥೆಗಳಿಗೆ ತಕ್ಷಣವೇ ಅನ್ವಯವಾಗುವಂತೆ ‘ಕ್ಲೋಷರ್ ಆರ್ಡರ್’ (ಮುಚ್ಚುವಿಕೆ ಆದೇಶ) ಹೊರಡಿಸಲಾಗಿದೆ.

24 ಗಂಟೆಯೊಳಗೆ ವರದಿ ಸಲ್ಲಿಕೆಗೆ ಗಡುವು:

ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಕೈಗೊಂಡಿರುವ ಕ್ರಮಗಳ ವಿವರವಾದ ವರದಿಯನ್ನು ಮುಂದಿನ 24 ಗಂಟೆಗಳ ಒಳಗಾಗಿ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ. ಈ ಹಿಂದೆ ಆಗಸ್ಟ್ 5ರಂದೇ ಸ್ಥಳೀಯ ಜಲಮೂಲಗಳ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿತ್ತು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಾಜಿ ಇಲ್ಲದ ಜಲ ಸಂರಕ್ಷಣೆ:

“ಸಾರ್ವಜನಿಕರ ಆರೋಗ್ಯ ಮತ್ತು ಕುಡಿಯುವ ನೀರಿನ ಜಲಮೂಲಗಳ ರಕ್ಷಣೆಯ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಗುರುಗಂಗಾ ನದಿ ಸೇರಿದಂತೆ ನಮ್ಮ ನೈಸರ್ಗಿಕ ಜಲಮೂಲಗಳನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೈಗಾರಿಕೆಗಳ ಬೇಜವಾಬ್ದಾರಿತನದಿಂದಾಗಿ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲಾಗುತ್ತಿದ್ದ ದುಷ್ಪರಿಣಾಮಗಳನ್ನು ತಡೆಯಲು ಈ ನಿರ್ಣಾಯಕ ಹೆಜ್ಜೆ ಇಡಲಾಗಿದೆ.

 


Share this with Friends

Related Post