Thu. Sep 24th, 2026

ಸಾಂತ್ವನ ಕೇಂದ್ರಗಳಲ್ಲಿ ‘ತೇರೆ – ಮೇರೇ ಸಪ್ನೆ – ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆ ಜಾರಿ: ಡಾ. ಶಾಲಿನಿ ರಜನೀಶ್

Share this with Friends

ಬೆಂಗಳೂರು:ರಾಜ್ಯದಲ್ಲಿ ಮಾಹಿತಿಯುಕ್ತ, ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಜಂಟಿ ಸಹಯೋಗದಲ್ಲಿ ‘ತೇರೆ- ಮೇರೇ ಸಪ್ನೆ – ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.

ಇಂದು ಬೆಂಗಳೂರಿನ ಜವಹರ್ ಬಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

“ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಮದುವೆಗೆ ಮುನ್ನ ಯುವಜನರಲ್ಲಿ ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಹಾಗೂ ಧನಾತ್ಮಕ ಸಂವಹನ ಬೆಳೆಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 178 ಸಾಂತ್ವನ ಕೇಂದ್ರಗಳ ಮೂಲಕ ವಿವಾಹ ಪೂರ್ವ ಸಂವಹನ ಕೇಂದ್ರಗಳನ್ನು (PMCC) ಸ್ಥಾಪಿಸುತ್ತಿದ್ದು, ಉಚಿತ ಸಮಾಲೋಚನೆ ಒದಗಿಸುವ ಮೂಲಕ ಕುಟುಂಬ ಸಂಸ್ಥೆಯನ್ನು ಬಲಪಡಿಸಲು ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ” ಎಂದು ತಿಳಿಸಿದರು.

​ಯುವಜನರು ಮದುವೆಗೂ ಮುನ್ನ ಅಗತ್ಯ ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಮಾಡುವುದು ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ ಎಂದು ಅವರು ವಿವರಿಸಿದರು.

​ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW), ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ (KSWC) ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು.

ಯೋಜನೆಯ ಪ್ರಮುಖ ಉದ್ದೇಶಗಳು : 

​ಆರೋಗ್ಯಕರ ವೈವಾಹಿಕ ಜೀವನ: ಮದುವೆಗೆ ಮುನ್ನ ನಿರೀಕ್ಷಿತ ದಂಪತಿಗಳ ನಡುವೆ ಪರಸ್ಪರ ತಿಳುವಳಿಕೆ, ಗೌರವ ಮತ್ತು ಭಾವನಾತ್ಮಕ ಸಿದ್ಧತೆಯನ್ನು ಬೆಳೆಸುವುದು.

​ಆರ್ಥಿಕ ಹಾಗೂ ಮಾನಸಿಕ ಜಾಗೃತಿ: ಜವಾಬ್ದಾರಿಗಳ ಹಂಚಿಕೆ, ಆರ್ಥಿಕ ನಿರ್ವಹಣೆ ಮತ್ತು ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ರಚನಾತ್ಮಕ ಸಮಾಲೋಚನೆ ನಡೆಸುವುದು.

​ಕಲಹಗಳ ತಡೆಗಟ್ಟುವಿಕೆ: ಪ್ರಬುದ್ಧ ಸಂವಾದ ಹಾಗೂ ವೃತ್ತಿಪರ ಮಾರ್ಗದರ್ಶನದ ಮೂಲಕ ಅನಗತ್ಯ ಕೌಟುಂಬಿಕ ಕಲಹಗಳನ್ನು ತಡೆದು, ಲಿಂಗ-ಸೂಕ್ಷ್ಮ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸುವುದು.

ಸಂಸ್ಥೆಗಳ ಜವಾಬ್ದಾರಿ ಹಂಚಿಕೆ : 

​ಈ ಬೃಹತ್ ಯೋಜನೆಯನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮೂರೂ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ಹಂಚಿಕೊಂಡಿವೆ.

ರಾಷ್ಟ್ರೀಯ ಮಹಿಳಾ ಆಯೋಗ (NCW):

ಯೋಜನೆಗೆ ಅಗತ್ಯವಾದ ಪ್ರಮಾಣೀಕೃತ ತರಬೇತಿ ಮಾಡ್ಯೂಲ್‌ಗಳನ್ನು ಪೂರೈಸುವುದು, ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸುವುದು ಹಾಗೂ ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣೆ ವಹಿಸುವುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

ರಾಜ್ಯದ 178 ಸಾಂತ್ವನ ಕೇಂದ್ರಗಳನ್ನು ನಿರ್ವಹಿಸುವುದು ಹಾಗೂ ಸಾರ್ವಜನಿಕರಿಗೆ/ಫಲಾನುಭವಿಗಳಿಗೆ ಸಂಪೂರ್ಣ ಉಚಿತ ವಿವಾಹ ಪೂರ್ವ ಸಮಾಲೋಚನಾ ಸೇವೆಗಳನ್ನು ನೀಡುವುದು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ (KSWC):

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು.

​ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಹೆಜ್ಜೆ

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ವಿಜಯ ರಹತ್ಕರ್ ಅವರು ಮಾತನಾಡಿ, ಬಲವಾದ ಕುಟುಂಬಗಳ ನಿರ್ಮಾಣಕ್ಕೆ ಉತ್ತಮ ಸಂವಹನ ಮತ್ತು ನಂಬಿಕೆ ಅಡಿಪಾಯವಾಗಿದೆ ಎಂದು ಹೇಳಿದರು. ಈ 178 ಕೇಂದ್ರಗಳ ಸೇರ್ಪಡೆಯೊಂದಿಗೆ, ಕರ್ನಾಟಕವು ದೇಶದಲ್ಲೇ ಅತಿ ದೊಡ್ಡ ಅನುಷ್ಠಾನ ರಾಜ್ಯಗಳಲ್ಲಿ ಒಂದಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 285ಕ್ಕೂ ಹೆಚ್ಚು ಕೇಂದ್ರಗಳಿಗೆ ಮಾರ್ಗದರ್ಶನ ನೀಡಿದಂತಾಗಿದೆ ಎಂದು ತಿಳಿಸಿದರು.

 

​


Share this with Friends

Related Post