Thu. Aug 13th, 2026

ಸಚಿವ ನಾಗೇಂದ್ರ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹ: ಸದನದ ಒಳಗೂ, ಹೊರಗೂ ಹೋರಾಟದ ಎಚ್ಚರಿಕೆ

Share this with Friends

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯುವಿ. ವಿಜಯೇಂದ್ರ ಅವರು ತೀವ್ರ ಒತ್ತಾಯ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಬಗ್ಗೆ ಅವರಿಗೆ ಕನಿಷ್ಠ ಗೌರವವಿದ್ದರೂ ಅವರು ನೈತಿಕ ಹೊಣೆ ಹೊತ್ತು ಸಚಿವ ಸಂಪುಟದಿಂದ ಹೊರನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣಗಳ ವಿರುದ್ಧ ಹರಿಹಾಯ್ದರು. ಬಿಹಾರದ ಮುಖ್ಯಮಂತ್ರಿ ಜಾಮೀನಿನ ಮೇಲಿರುವ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ವಿಜಯೇಂದ್ರ, “ಕಾಂಗ್ರೆಸ್ಸಿಗರಿಗೆ ಧೈರ್ಯವಿದ್ದರೆ ಬಿಹಾರಕ್ಕೆ ಹೋಗಿ ಹೋರಾಟ ಮಾಡಲಿ, ಅಲ್ಲಿ ಪ್ರಶ್ನೆ ಎತ್ತಲಿ” ಎಂದು ಸವಾಲು ಹಾಕಿದರು.

ಮೃತ ಅಧಿಕಾರಿಯ ಕುಟುಂಬಕ್ಕೆ ಅಪಮಾನ: ಆರೋಪ

ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ಅಧೀಕ್ಷಕ ಚಂದ್ರಶೇಖರ್ ಅವರ ಕುಟುಂಬದ ಸ್ಥಿತಿಯ ಬಗ್ಗೆ ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು. “ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಧರ್ಮಪತ್ನಿಯ ಹೇಳಿಕೆಯನ್ನು ಸರ್ಕಾರ ಗಮನಿಸಬೇಕಿದೆ. ಇಂದಿಗೂ ಆ ಬಡ ಕುಟುಂಬಕ್ಕೆ ಸಿಗಬೇಕಾದ ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯಗಳು ಸಿಕ್ಕಿಲ್ಲ. ಅಧೀಕ್ಷಕರಾಗಿದ್ದ ಚಂದ್ರಶೇಖರ್ ಅವರ ಮಗನಿಗೆ ಈ ಕಾಂಗ್ರೆಸ್ ಸರ್ಕಾರ ಜವಾನನ (ಪ್ಯೂನ್) ಕೆಲಸ ನೀಡಿ ಅಪಮಾನ ಮಾಡಿದೆ” ಎಂದು ಅವರು ಆಕ್ರೋಶ ಹೊರಹಾಕಿದರು.

ಜಾತಿಯ ಹೆಸರು ಹೇಳಿ ತಪ್ಪಿಸಿಕೊಳ್ಳಬೇಡಿ

“ನಮಗೆ ವೈಯಕ್ತಿಕವಾಗಿ ನಾಗೇಂದ್ರ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ನಾಗೇಂದ್ರ ಅವರು ರಾಜೀನಾಮೆ ನೀಡುವ ಪ್ರಸಂಗ ಏಕೆ ಎದುರಾಗಿತ್ತು ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ನಿಗಮದ 185 ಕೋಟಿ ರೂಪಾಯಿ ಲೂಟಿ ಪ್ರಕರಣದಲ್ಲಿ ತೆಲಂಗಾಣಕ್ಕೆ ಹಣ ವರ್ಗಾವಣೆಯಾಗಿ ದುರುಪಯೋಗವಾಗಿರುವುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಅವರ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾಗಿದ್ದು, ಅವರು ಇನ್ನೂ ಅಪರಾಧಿ ಸ್ಥಾನದಿಂದ ಮುಕ್ತರಾಗಿಲ್ಲ. ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾದ ಬಳಿಕ ಅವರು ಸಚಿವರಾದರೆ ನಮ್ಮದೇನೂ ಅಭ್ಯಂತರವಿಲ್ಲ. ಘೋರ ಆಪಾದನೆ ಹೊತ್ತಿರುವಾಗ ಜಾತಿಯ ಹೆಸರು ಹೇಳಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ” ಎಂದು ವಿಜಯೇಂದ್ರ ನೇರ ಎಚ್ಚರಿಕೆ ನೀಡಿದರು.

ಸದನದಲ್ಲಿ ಹೋರಾಟದ ಮುನ್ಸೂಚನೆ

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪಕ್ಷದ ವತಿಯಿಂದ ಸದನದ ಒಳಗೂ ಮತ್ತು ಹೊರಗೂ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು. ಇದೇ ವೇಳೆ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಪಮಾನ ಮಾಡಿ, ಕಾಂಗ್ರೆಸ್ ಸರ್ಕಾರ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಿಳೆಯರ ಬಗ್ಗೆ ಕಾಳಜಿ ಇಲ್ಲ:

ಕೇಂದ್ರದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಸಂಬಂಧ ಮಸೂದೆ ತಂದರೆ, ಅದನ್ನೂ ಕಾಂಗ್ರೆಸ್ಸಿನವರು ಸಂಸತ್ತಿನಲ್ಲಿ ವಿರೋಧಿಸಿದ್ದಾರೆ. ಅಧಿವೇಶನ ಪ್ರಾರಂಭವಾಗುತ್ತಿದ್ದು, ಬಹುಶಃ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲ; ಅಣ್ಣ ಬಸವಣ್ಣನವರು, ಶರಣೆ ಅಕ್ಕಮಹಾದೇವಿಯವರು ಹುಟ್ಟಿದ ಈ ನಾಡಿನಲ್ಲಿ ಕಾಂಗ್ರೆಸ್ ಸರಕಾರವು ಸಚಿವಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ; ಸರಕಾರಕ್ಕೆ ಮಹಿಳೆಯರ ಬಗೆಗಿನ ಕಾಳಜಿಯನ್ನು ಇದು ತೋರಿಸುತ್ತದೆ. ಮುಖ್ಯಮಂತ್ರಿಗಳು ಮತ್ತು ಸರಕಾರ ಮಹಿಳೆಯರಿಗೆ ಅಪಮಾನ, ಅನ್ಯಾಯವನ್ನು ಮಾಡಿದೆ ಎಂದು ಟೀಕಿಸಿದರು.

 

 


Share this with Friends

Related Post