Thu. Aug 13th, 2026

 “ಕ್ಲೀನ್ & ಗ್ರೀನ್ ಹಂಪಿ” ಅಭಿಯಾನಕ್ಕೆ ಚಾಲನೆ; ಸಮಗ್ರ ಸ್ವಚ್ಛತೆಗೆ ಜಾಗತಿಕ ಟೆಂಡರ್

Share this with Friends

ಬೆಂಗಳೂರು: ಯುನೆಸ್ಕೋ ಗುರುತಿಸಿರುವ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯನ್ನು ಮತ್ತಷ್ಟು ಸ್ವಚ್ಛ, ಹಸಿರು ಮತ್ತು ಪ್ರವಾಸಿ ಸ್ನೇಹಿ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನೇರ ನಿರ್ದೇಶನದಂತೆ ಹಂಪಿಯ ಅಂದವನ್ನು ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಜಯನಗರ ಜಿಲ್ಲಾಧಿಕಾರಿಗಳಿಗೆ “ಕ್ಲೀನ್ & Green ಹಂಪಿ” ಎಂಬ ವಿಶೇಷ ಅಭಿಯಾನವನ್ನು ರೂಪಿಸುವಂತೆ ಸೂಚನೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಪಿಯ ಪರಿಸರ ಸಂರಕ್ಷಣೆ ಮತ್ತು ಮೂಲಸೌಕರ್ಯಗಳ ಕುರಿತು ನಡೆಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಾಯಕ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರವಾಸಿಗರ ಸಹಭಾಗಿತ್ವದೊಂದಿಗೆ ಜಾಗೃತಿ

ಸಭೆಯಲ್ಲಿ ಮಾತನಾಡಿದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, “ಹಂಪಿಯಂತಹ ಜಾಗತಿಕ ಪ್ರಸಿದ್ಧ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಕೇವಲ ಇಲಾಖೆಯ ಜವಾಬ್ದಾರಿಯಲ್ಲ. ಇದು ಅಲ್ಲಿಗೆ ಭೇಟಿ ನೀಡುವ ದೇಶ-ವಿದೇಶಗಳ ಪ್ರತಿಯೊಬ್ಬ ಪ್ರವಾಸಿಗ ಹಾಗೂ ಸ್ಥಳೀಯ ಸಾರ್ವಜನಿಕರ ಕರ್ತವ್ಯವೂ ಆಗಿದೆ. ಆದ್ದರಿಂದ ಸಾರ್ವಜನಿಕರನ್ನು ಸಕ್ರಿಯವಾಗಿ ಒಳಗೊಳ್ಳುವಂತಹ ಮತ್ತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಗ್ರ ಒಮ್ಮತದ ಕಾರ್ಯಯೋಜನೆ ಸಿದ್ಧಪಡಿಸಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ವಚ್ಛತೆಗೆ ಬೃಹತ್ ಏಜೆನ್ಸಿ ನೇಮಕ: ಟೆಂಡರ್ ಪ್ರಕ್ರಿಯೆಗೆ ಚಾಲನೆ

ಹಂಪಿಯ ಸ್ಮಾರಕಗಳ ವಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಹಾಗೂ ದೈನಂದಿನ ಸ್ವಚ್ಛತಾ ನಿರ್ವಹಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ (HDA) ವಿಶೇಷ ಸೂಚನೆ ನೀಡಲಾಗಿದೆ. ಇದರ ಅಡಿಯಲ್ಲಿ ಇಡೀ ತಾಣದ ನಿರ್ವಹಣೆಯನ್ನು ಹೊಣೆ ಹೊರಬಲ್ಲ ಸಮರ್ಥ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ಪ್ರತಿಷ್ಠಿತ ಏಜೆನ್ಸಿಯನ್ನು ನೇಮಕ ಮಾಡಲು ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸುವಂತೆ ಆದೇಶಿಸಿದರು.

ಆಯ್ಕೆಯಾಗುವ ಹೊಸ ಏಜೆನ್ಸಿಯ ಮೂಲಕ ಹಂಪಿಯ ವಿವಿಧ ಪ್ರವಾಸಿ ತಾಣಗಳಲ್ಲಿ ಕಸದ ಸಮರ್ಪಕ ವಿಲೇವಾರಿ, ಪರಿಸರ ಸ್ನೇಹಿ ಗಿಡಗಳನ್ನು ನೆಡುವುದು ಮತ್ತು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದರು.

ಹಂಪಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ: 

ಹಂಪಿ ಜಾಗತಿಕ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ವ್ಯಾಪ್ತಿಯಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಅಧಿಕಾರಿಗಳಿಗೆ ಉನ್ನತ ಮಟ್ಟದ ಆದೇಶ ನೀಡಲಾಯಿತು. ಹಂಪಿಯನ್ನು ಕಸ ಮುಕ್ತ ಹಾಗೂ ಪರಿಸರ ಸ್ನೇಹಿ ವಲಯವನ್ನಾಗಿ ಮಾರ್ಪಡಿಸಲು ಈ ನಿರ್ಧಾರ ಅತ್ಯಂತ ಮಹತ್ವದ ಹೆಜ್ಜೆಯಾಗಲಿದೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳು ನಡೆಸಿದ ಸಭೆಯಲ್ಲಿ, ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಲ್ಪಿಸಲಾಗುತ್ತಿರುವ ಮೂಲಸೌಕರ್ಯ ಹಾಗೂ ನೈರ್ಮಲ್ಯದ ಕುರಿತು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಶೌಚಾಲಯಗಳ ಸ್ವಚ್ಛತೆಗೆ ವಿಶೇಷ ಗಮನ: ಡಿಸಿಗೆ ಸೂಚನೆ

ಹಂಪಿಯ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದ ಸಮೀಪವಿರುವ ಸಾರ್ವಜನಿಕ ಶೌಚಾಲಯಗಳ ಅಧ್ವಾನದ ಬಗ್ಗೆ ಕೇಳಿಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿರೂಪಾಕ್ಷ ದೇವಸ್ಥಾನದ ಸಮೀಪದ ಶೌಚಾಲಯ ಸಂಕೀರ್ಣದ ಸ್ವಚ್ಛತೆ ಹಾಗೂ ಸುಗಮ ನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿಗಳು ಹಾಗೂ ಹಂಪಿ ಪ್ರಾಧಿಕಾರದ ಅಧ್ಯಕ್ಷರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. ಪ್ರವಾಸಿಗರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನಿತ್ಯ ಬಳಸುವ ಶೌಚಾಲಯಗಳ ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಆದೇಶಿಸಲಾಯಿತು.

ಹಂಪಿ ನೂಕ್ ಯೋಜನೆ: ಆಧುನಿಕ ಸೌಲಭ್ಯಗಳ ಮರುಸೃಷ್ಟಿ

ಹಂಪಿಗೆ ದೇಶ-ವಿದೇಶಗಳಿಂದ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹೆಚ್ಚುತ್ತಿರುವ ಬೇಡಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಪ್ರವಾಸಿ ಮೂಲಸೌಕರ್ಯಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತರಲು ಇಲಾಖೆ ಮುಂದಾಗಿದೆ. ಇದರ ಭಾಗವಾಗಿ “ಹಂಪಿ ನೂಕ್” (Hampi Nook) ಯೋಜನೆಯಡಿ ಜಾಗತಿಕ ಗುಣಮಟ್ಟದ ಹೊಸ ಹೈಟೆಕ್ ಶೌಚಾಲಯ ಸಂಕೀರ್ಣವನ್ನು ಪುನರ್‌ನಿರ್ಮಿಸಲು ತುರ್ತಾಗಿ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರವಾಸೋದ್ಯಮ ಇಲಾಖೆಯು ಹಮ್ಮಿಕೊಂಡಿರುವ “ಕ್ಲೀನ್ & ಗ್ರೀನ್ ಹಂಪಿ” ಅಭಿಯಾನದ ಮೂಲಕ ಹಂಪಿಯ ಮೂಲ ಐತಿಹಾಸಿಕ ಮತ್ತು ಪಾರಂಪರಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ, ಕೇವಲ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಮಾತ್ರವಲ್ಲದೆ ಪ್ರವಾಸಿಗರಿಗೆ ಅತ್ಯುತ್ತಮ ಮತ್ತು ಮರೆಯಲಾಗದ ಅನುಭವವನ್ನು ನೀಡುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರ ಕೆ.ಜೆ. ಜಾರ್ಜ್, “ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹಂಪಿಯನ್ನು ಕೇವಲ ಪ್ರವಾಸಿ ತಾಣವಾಗಿ ನೋಡುವುದಕ್ಕಿಂತ, ಅದರ ಪಾರಂಪರಿಕ ಮಹತ್ವವನ್ನು ಕಾಪಾಡಿಕೊಂಡು ಸ್ವಚ್ಛ, ಹಸಿರು ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ‘ಕ್ಲೀನ್‌ & ಗ್ರೀನ್‌ ಹಂಪಿ’ ಅಭಿಯಾನದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಸಹಭಾಗಿತ್ವವನ್ನು ಖಚಿತಪಡಿಸಿಕೊಂಡು, ಹಂಪಿಯ ಸೌಂದರ್ಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು”ಎಂದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ,”ಹಂಪಿ ಕರ್ನಾಟಕದ ಹೆಮ್ಮೆಯ ಪಾರಂಪರಿಕ ತಾಣವಾಗಿದ್ದು, ಇಲ್ಲಿನ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. “ಕ್ಲೀನ್‌ & ಗ್ರೀನ್‌ ಹಂಪಿ”ಯನ್ನು ಕೇವಲ ಸರ್ಕಾರಿ ಇಲಾಖೆಗಳ ಅಭಿಯಾನವನ್ನಾಗಿ ಮಾಡದೆ, ಪ್ರವಾಸೋದ್ಯಮ ಸಚಿವರ ನಿರ್ದೇಶನದಂತೆ ಸಾರ್ವಜನಿಕರು ಮತ್ತು ಪ್ರವಾಸಿಗರು ಸಕ್ರಿಯವಾಗಿ ಭಾಗವಹಿಸುವ ಜನಾಭಿಯಾನವಾಗಿ ರೂಪಿಸಲು ಸೂಚಿಸಲಾಗಿದೆ. ಸ್ವಚ್ಛತೆ, ಪ್ಲಾಸ್ಟಿಕ್‌ ನಿಯಂತ್ರಣ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು”ಎಂದರು.

 

 


Share this with Friends

Related Post