ಬೆಂಗಳೂರು: “ರಾಜ್ಯದ ಅಡಿಕೆ ಬೆಳೆಗಾರರು ಹಾಗೂ ರೈತರ ಹಿತಾಸಕ್ತಿಯನ್ನು ಬಲಿಗೊಟ್ಟು ಕಾಂಗ್ರೆಸ್ ಸರ್ಕಾರವು ಅವರ ಮೇಲೆ ಗದಾಪ್ರಹಾರ ಮಾಡಲು ಸಂಚು ರೂಪಿಸುತ್ತಿದೆ ಎಂಬ ದಟ್ಟ ಗುಮಾನಿ ರೈತಾಪಿ ವಲಯದಲ್ಲಿ ಮೂಡಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯುವಿ. ವಿಜಯೇಂದ್ರ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧದ ನೆಪದಲ್ಲಿ ಸರ್ಕಾರವು ಅಡಿಕೆ ಬೆಳೆಗಾರರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಕಠೋರವಾಗಿ ಟೀಕಿಸಿದರು.
ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಅಡಿಕೆ ವಲಯ:
ರಾಜ್ಯದ ಭೌಗೋಳಿಕ ಮತ್ತು ಆರ್ಥಿಕತೆಯಲ್ಲಿ ಅಡಿಕೆ ಬೆಳೆಯ ಪ್ರಾಮುಖ್ಯತೆಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ ವಿಜಯೇಂದ್ರ, “ದೇಶಾದ್ಯಂತ ಒಟ್ಟು 9 ಲಕ್ಷದ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿದ್ದರೆ, ಈ ಪೈಕಿ ಕೇವಲ ಕರ್ನಾಟಕದಲ್ಲೇ ಬರೋಬ್ಬರಿ 6 ಲಕ್ಷದ 76 ಸಾವಿರದ 940 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ಇಡೀ ದೇಶದ ಒಟ್ಟು ಉತ್ಪಾದನೆಯ ಶೇಕಡಾ 76ರಷ್ಟು ಭಾಗ ನಮ್ಮ ರಾಜ್ಯದ್ದೇ ಆಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ರೈತರ ಜೀವನಾಡಿಯಾಗಿರುವ ಈ ಬೆಳೆಯ ಸೂಕ್ಷ್ಮತೆ ಅರಿತೂ ಸರ್ಕಾರವು ನಿಷೇಧದ ವದಂತಿಗಳ ಮೂಲಕ ಮಾರುಕಟ್ಟೆಯಲ್ಲಿ ಹಾವು ಬಿಡುವ ಕೆಲಸ ಮಾಡುತ್ತಿದೆ” ಎಂದು ಕಿಡಿಕಾರಿದರು.
ಅಡಿಕೆ ಬೆಳೆಗಾರರಲ್ಲಿ ಆವರಿಸಿರುವ ಭೀತಿಯನ್ನು ನಿವಾರಿಸಲು ಸೋಮವಾರ ಅಥವಾ ಮಂಗಳವಾರ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಿಗದಿಪಡಿಸುವಂತೆ ಕೋರಲಾಗಿದೆ. ಕ್ಯಾಂಪ್ಕೋ (CAMPCO) ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಪ್ರಮುಖರ ನಿಯೋಗವು ಸಿಎಂ ಅವರನ್ನು ಖುದ್ದಾಗಿ ಭೇಟಿ ಮಾಡಿ, ರೈತರಿಗೆ ಮಾರಕವಾಗುವ ಯಾವುದೇ ನಿರ್ಧಾರ ಕೈಗೊಳ್ಳದಂತೆ ಕಟ್ಟುನಿಟ್ಟಿನ ಆಗ್ರಹ ಮಂಡಿಸಲಿದೆ ಎಂದು ಅವರು ತಿಳಿಸಿದರು.
ಅಧಿಸೂಚನೆಯಿಂದ ಕುಸಿದ ಅಡಿಕೆ ಧಾರಣೆ – ಅರಗ ಜ್ಞಾನೇಂದ್ರ ಕಳವಳ:
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಗೃಹ ಸಚಿವ ಹಾಗೂ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, “ರಾಜ್ಯದ ಸುಮಾರು 145 ತಾಲ್ಲೂಕುಗಳಲ್ಲಿ ಹರಡಿರುವ 10 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳು ಕೇವಲ ಅಡಿಕೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿವೆ. ಆದರೆ ಇತ್ತೀಚೆಗೆ ಹೊರಬಿದ್ದ ಗೊಂದಲದ ಅಧಿಸೂಚನೆಯಿಂದಾಗಿ ಮಾರುಕಟ್ಟೆಯಲ್ಲಿ ದಿಢೀರನೆ ಅಡಿಕೆ ಬೆಲೆ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರ ಹಿತ ಕಾಯುವುದು ಮತ್ತು ಅವರಿಗೆ ಸಂಪೂರ್ಣ ರಕ್ಷಣೆ ನೀಡುವುದು ಕರ್ನಾಟಕ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ” ಎಂದು ಎಚ್ಚರಿಸಿದರು. ಮುಂಬರುವ ನಿಯೋಗದ ಭೇಟಿಯ ವೇಳೆ ಸರ್ಕಾರಕ್ಕೆ ರೈತರ ಆರ್ಥಿಕ ಸ್ಥಿತಿಗತಿಯ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

