Fri. Aug 14th, 2026

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಪರೀಕ್ಷೆ, 7 ದಿನದಲ್ಲಿ ಒಎಂಆರ್ ಅಪ್‌ಲೋಡ್: ತ್ವರಿತ ನೇಮಕಾತಿ ವ್ಯವಸ್ಥೆಗೆ ಆಯೋಗದ ಒಮ್ಮತದ ನಿರ್ಧಾರ

Share this with Friends

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಗಳನ್ನು ಇನ್ನುಮುಂದೆ ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ಅತ್ಯಂತ ತ್ವರಿತ ಹಾಗೂ ಪಾರದರ್ಶಕವಾಗಿ ನಡೆಸಲು ಮಹತ್ವದ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ನಡೆದ ಆಯೋಗದ ಉನ್ನತ ಮಟ್ಟದ ಸಭೆಯಲ್ಲಿ ತಂತ್ರಜ್ಞಾನಾಧಾರಿತ ಸುಧಾರಣೆಗಳ ಕುರಿತು ದೀರ್ಘ ಚರ್ಚೆ ನಡೆಸಲಾಗಿದ್ದು, ಗರಿಷ್ಠ 3 ರಿಂದ 5 ತಿಂಗಳೊಳಗೆ ಇಡೀ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಜಂಟಿ ಗುರಿ ಹೊಂದಲಾಗಿದೆ.ರಾಜ್ಯ ಸರ್ಕಾರದ ಆಶಯದಂತೆ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ರೀತಿಯ ಗೊಂದಲಗಳಿಲ್ಲದೆ ಅತ್ಯಂತ ವೇಗವಾಗಿ ಮುಕ್ತಾಯಗೊಳಿಸಲು ಇಡೀ ಆಯೋಗವು ಒಟ್ಟಾಗಿ ಸಜ್ಜಾಗಿದೆ.

ಇದೇ ಸಭೆಯಲ್ಲಿ ಕೆಪಿಎಸ್‌ಸಿಯ ನೂತನ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರನ್ನು ಆಯೋಗದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಪರೀಕ್ಷೆ ಮುಗಿದ ಒಂದೇ ವಾರದಲ್ಲಿ ಫಲಿತಾಂಶದ ಮುನ್ಸೂಚನೆ:

ನೂತನ ಪರೀಕ್ಷಾ ನಿಯಂತ್ರಕ ಹೆಚ್. ಪ್ರಸನ್ನ ಅವರು ಸಭೆಯಲ್ಲಿ ಸುಧಾರಣಾ ಕ್ರಮಗಳನ್ನು ವಿವರಿಸುತ್ತಾ, “ನೇಮಕಾತಿ ಪರೀಕ್ಷೆಗಳು ಮುಕ್ತಾಯಗೊಂಡ ತಕ್ಷಣವೇ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿರುವ ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳ ಸಹಾಯದಿಂದ ಒಎಂಆರ್ (OMR) उत्तर ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ನಂತರ ಆಯಾ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಆಯೋಗದ ಅಧಿಕೃತ ಅಂತರ್ಜಾಲ ತಾಣದಲ್ಲಿ ನೇರವಾಗಿ ಅಪ್‌ಲೋಡ್ ಮಾಡಲಾಗುವುದು. ಇದರಿಂದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ತಾವೇ ಸ್ವತಃ ಪರಿಶೀಲಿಸಿಕೊಳ್ಳಲು ಅನುಕೂಲವಾಗಲಿದ್ದು, ಪರೀಕ್ಷೆ ನಡೆದ ಕೇವಲ ಒಂದು ವಾರದೊಳಗೆ ಪ್ರಾಥಮಿಕ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು. ಯುಪಿಎಸ್‌ಸಿ ಮಾದರಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವುದರಿಂದ ಪರೀಕ್ಷೆ ನಡೆಸುವಿಕೆ, ಮೌಲ್ಯಮಾಪನ ಹಾಗೂ ಅಂತಿಮ ಫಲಿತಾಂಶ ಪ್ರಕಟಣೆಯ ನಡುವಿನ ಸುದೀರ್ಘ ಕಾಲಾವಕಾಶವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಬೇಡಿ – ಕೆಪಿಎಸ್‌ಸಿ ಎಚ್ಚರಿಕೆ:

ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ಮತ್ತು ಸುಧಾರಿತ ತಂತ್ರಜ್ಞಾನದ ಬಳಕೆ ಮಾಡುವ ನಿಟ್ಟಿನಲ್ಲಿ ಆಯೋಗದ ಎಲ್ಲಾ ಸದಸ್ಯರು ನೂತನ ನಿಯಂತ್ರಕರ ಪ್ರಸ್ತಾವನೆಗೆ ಪೂರ್ಣ ಸಹಕಾರ ಹಾಗೂ ಒಪ್ಪಿಗೆ ನೀಡಿದ್ದಾರೆ. ಇದೇ ವೇಳೆ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಆಯೋಗವು, “ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವುದೇ ಅನಧಿಕೃತ ವ್ಯಕ್ತಿಗಳು ಅಥವಾ ಮಧ್ಯವರ್ತಿಗಳು ನೀಡುವ ಆಮಿಷ ಹಾಗೂ ಭರವಸೆಗಳಿಗೆ ಬಲಿಯಾಗಬಾರದು. ಮಾರುಕಟ್ಟೆಯಲ್ಲಿ ಹರಡುವ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸಬೇಕು. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಠಿಣ ನಿಗಾ ವಹಿಸಲಾಗುತ್ತಿದ್ದು, ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಸರ್ಕಾರದ ನೇಮಕಾತಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

 

 


Share this with Friends

Related Post