ಬೆಂಗಳೂರು: ಚಾಮರಾಜನಗರದ ಕಾವೇರಿ ವನ್ಯಜೀವಿಧಾಮದ ಅರಣ್ಯ ವ್ಯಾಪ್ತಿಯಲ್ಲಿ ಇಲಾಖಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣದ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ಮುಖ್ಯಮಂತ್ರಿಗಳು ಈಗಾಗಲೇ ಉನ್ನತ ಮಟ್ಟದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ. ಈ ಅಧಿಕೃತ ನ್ಯಾಯಾಂಗ ವರದಿ ಕೈ ಸೇರುವ ಮುನ್ನ ಇಲಾಖೆಯ ಸಿಬ್ಬಂದಿಯ ವಿರುದ್ಧ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ” ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಅರಣ್ಯ ಅಧಿಕಾರಿಗಳು ನೀಡಿರುವ ಆರಂಭಿಕ ವರದಿಯ ಪ್ರಕಾರ, ಶಾಗ್ಯ ವಲಯದ ಸಂರಕ್ಷಿತ ಅರಣ್ಯದೊಳಗೆ ಇಲಾಖೆಯ ಎರಡು ವಿಶೇಷ ಗಸ್ತು ತಂಡಗಳು ಜಂಟಿ ಕಾರ್ಯಾಚರಣೆಗೆ ಇಳಿದಿದ್ದವು. ಈ ವೇಳೆ ಮುಂಜಾನೆ 5:10 ರ ಸುಮಾರಿಗೆ ನಾಲ್ಕು ಜನ ಶಂಕಿತ ವ್ಯಕ್ತಿಗಳು ಎರಡು ನಾಡಬಂದೂಕುಗಳು ಹಾಗೂ ಜಿಂಕೆ ಮಾಂಸ ತುಂಬಿದ್ದ ಬ್ಯಾಗ್‌ಗಳೊಂದಿಗೆ ಕಾಡಿನೊಳಗೆ ಪತ್ತೆಯಾಗಿದ್ದಾರೆ. ಇಲಾಖಾ ಸಿಬ್ಬಂದಿ ಅವರನ್ನು ಸುತ್ತುವರಿದಾಗ, ಶಂಕಿತರು ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಸಿಬ್ಬಂದಿ ಅನಿವಾರ್ಯವಾಗಿ ಪ್ರತಿಗುಂಡು ಹಾರಿಸಬೇಕಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆದರೆ, ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಹಳ್ಳಿಗರು ಇದನ್ನು ‘ನಕಲಿ ಎನ್‌ಕೌಂಟರ್’ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಾರೆ ಎಂದರು.
“ಸಾರ್ವಜನಿಕರು ಮತ್ತು ಇಲಾಖೆಯ ವಾದದಲ್ಲಿ ವ್ಯತ್ಯಾಸವಿದೆ. ಗುಂಡಿನ ದಾಳಿಯು ತೀರಾ ಹತ್ತಿರದಿಂದ ನಡೆದಿದೆಯೇ ಅಥವಾ ನಿಜವಾಗಿಯೂ ಆತ್ಮರಕ್ಷಣೆಗಾಗಿ ಶೂಟ್ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆ (Post-mortem) ಹಾಗೂ ಬ್ಲಿಸ್ಟಿಕ್ ವರದಿಗಳು ಬಂದ ಬಳಿಕವಷ್ಟೇ ಸಾಬೀತಾಗಲಿದೆ” ಎಂದರು.
ತಪ್ಪು ಮಾಡಿದ್ದರೆ ಕಠಿಣ ಶಿಕ್ಷೆ ಖಚಿತ
ಘಟನಾ ಸ್ಥಳದ ಮಹಜರು ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಮೃತದೇಹಗಳನ್ನು ತರಾತುರಿಯಲ್ಲಿ ಬೇರೆ ಜಿಲ್ಲೆಯ ಆಸ್ಪತ್ರೆಗೆ ಸಾಗಿಸಿರುವ ಕುರಿತು ವ್ಯಕ್ತವಾಗಿರುವ ಅನುಮಾನಗಳಿಗೂ ಈ ನ್ಯಾಯಾಂಗ ತನಿಖೆಯಲ್ಲೇ ಉತ್ತರ ಸಿಗಲಿದೆ ಎಂದು ಸಚಿವರು ವಿವರಿಸಿದರು. “ನಾನು ಇತ್ತೀಚೆಗಷ್ಟೇ ಈ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಸಿಬ್ಬಂದಿ ನಡುವಿನ ಇಂತಹ ಸಂಘರ್ಷಗಳನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಒಂದು ವೇಳೆ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಡಿರುವುದು ದೃಢಪಟ್ಟರೆ, ಸರ್ಕಾರ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ” ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

