ಮಡಿಕೇರಿ: “ರಾಜ್ಯದಲ್ಲಿ ಯಾವುದೇ ಸಂಘಟನೆಯಾಗಲಿ ಅಥವಾ ರಾಜಕೀಯ ಪಕ್ಷವಾಗಲಿ ಮೊದಲು ದೇಶದ ಕಾನೂನನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಸರ್ಕಾರಿ ಜಾಗಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನ ಪೂರ್ವಾನುಮತಿ ಪಡೆಯುವುದು ನಿಯಮಾವಳಿಗಳ ಭಾಗವಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸರ್ಕಾರಿ ಮೈದಾನ ಹಾಗೂ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮದ ಕುರಿತು ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ತಿರುಗೇಟು ನೀಡಿದರು.
“ನಾವು ಮೊದಲಿನಿಂದಲೂ ಸಣ್ಣಪುಟ್ಟ ವಿಷಯಗಳನ್ನು ಹಿಡಿದುಕೊಂಡು ರಾಜಕೀಯ ಮಾಡುವವರಲ್ಲ. ಈ ನಿಯಮದಿಂದ ಯಾರೂ ಅನಗತ್ಯವಾಗಿ ಗಾಬರಿಗೊಳ್ಳುವ ಅಗತ್ಯವಿಲ್ಲ” ಎಂದು ಡಿ.ಕೆ. ಶಿವಕುಮಾರ್ ನುಡಿದರು. “ಯಾವುದೇ ಸಂಘಟನೆಯಿಂದ ಸರ್ಕಾರಕ್ಕೆ ಅಧಿಕೃತವಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾದರೆ, ನಿಯಮಾನುಸಾರ ಪರಿಶೀಲಿಸಿ ಅಗತ್ಯ ಸೌಲಭ್ಯ ಹಾಗೂ ಸೂಕ್ತ ಪೊಲೀಸ್ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು” ಎಂದರು.
ಇದಕ್ಕೆ ಉದಾಹರಣೆ ನೀಡಿದ ಅವರು, “ನಮ್ಮದೇ ಪಕ್ಷದ ಸಚಿವರಾದ ಕೃಷ್ಣ ಬೈರೇಗೌಡರು ಕೂಡ ಹಿಂದೆ ‘ಫ್ರೀಡಂ ಹಬ್ಬ’ ಆಯೋಜಿಸಲು ಸರ್ಕಾರದ ನಿಯಮದಂತೆಯೇ ಅನುಮತಿ ಪಡೆದುಕೊಂಡಿದ್ದರು. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆಗಳಿದ್ದರೂ ನಾವೆಲ್ಲರೂ ಕಾನೂನಿನ ಪರಿಧಿಯೊಳಗೆಯೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಮುಕ್ತ ಅವಕಾಶವಿದೆ” ಎಂದು ತಿಳಿಸಿದರು.
ಅಧಿಕಾರ ದುರುಪಯೋಗಕ್ಕೆ ಆಸ್ಪದವಿಲ್ಲ
ಕಾಂಗ್ರೆಸ್ ಪಕ್ಷದ ಹಿಂದಿನ ಹೋರಾಟಗಳನ್ನು ನೆನಪಿಸಿಕೊಂಡ ಸಿಎಂ, “ಹಿಂದೆ ‘ವೋಟ್ ಚೋರಿ’ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಜಾಥಾ ನಡೆಸಬೇಕಿತ್ತು. ಆ ಸಂದರ್ಭದಲ್ಲಿ ನಾವು ಅಧಿಕಾರದಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳಬಾರದು ಮತ್ತು ಅಧಿಕಾರ ದುರುಪಯೋಗ ಮಾಡಬಾರದು ಎಂಬ ಕಾರಣಕ್ಕೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಮನವಿ ಮಾಡಿದ್ದೆವು. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ವಿವರಿಸಿದರು. ಅಂದು ಡಾ. ಜಿ. ಪರಮೇಶ್ವರ್ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಸೇರಿ ರಾಹುಲ್ ಗಾಂಧಿ ಅವರಲ್ಲಿ ಕಾನೂನಿಗೆ ಗೌರವ ನೀಡುವಂತೆ ವಿನಂತಿಸಿದ್ದೆವು ಎಂದು ಅವರು ನೆನಪಿಸಿಕೊಂಡರು.
ಉಪ್ಪಿನ ಸತ್ಯಾಗ್ರಹದ ಕುರಿತ ಹೇಳಿಕೆಗೆ ಪ್ರತಿಕ್ರಿಯೆ
“ಸ್ವಾತಂತ್ರ್ಯ ಕೇವಲ ಉಪ್ಪಿನ ಸತ್ಯಾಗ್ರಹ ಮತ್ತು ಚರಕದಿಂದ ಮಾತ್ರ ಬರಲಿಲ್ಲ” ಎಂಬ ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಶಿವಕುಮಾರ್, “ಅವರು ಪಕ್ಷದ ಹಿರಿಯ ನಾಯಕರಿದ್ದಾರೆ, ಅವರ ಮಾರ್ಗದರ್ಶನವನ್ನೂ ಕೇಳೋಣ. ಪ್ರಸ್ತುತ ಕಾನೂನಿನಲ್ಲಿ ಇರುವಂತಹ ನಿಯಮಗಳಿಗೆ ನಾವು ಇನ್ನಷ್ಟು ಸ್ಪಷ್ಟತೆ ನೀಡಿದ್ದೇವೆಯಷ್ಟೇ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಮಾಧ್ಯಮಗಳ ಮೂಲಕ ತಿಳಿಸಿದರು

