Sun. Aug 16th, 2026

ರಾಷ್ಟ್ರಗೀತೆಗೆ ಅಪಮಾನ ಆರೋಪ: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಯುವಮೋರ್ಚಾ  ದೂರು

Share this with Friends

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಷ್ಟ್ರಗೀತೆ ‘ವಂದೇ ಮಾತರಂ’ಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ (BJYM) ಕರ್ನಾಟಕ ಘಟಕವು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದೆ.

ಇಂದು ಯುವ ಮೋರ್ಚಾದ ಪದಾಧಿಕಾರಿಗಳು ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಲಿಖಿತವಾಗಿ ದೂರು ಸಲ್ಲಿಸಿ ವಿನಂತಿ ಮಾಡಿದ್ದಾರೆ.

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಆಗಸ್ಟ್ 15ರಂದು ನಡೆದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು:

ಘಟನೆಯ ವಿವರ: ಆಗಸ್ಟ್ 15 ರಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಿಯಮಾನುಸಾರ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸಲಾಗುತ್ತಿತ್ತು. ಆದರೆ ಅಲ್ಲಿ ಉಪಸ್ಥಿತರಿದ್ದ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗೀತೆಗೆ ಗೌರವ ಸೂಚಿಸದೆ, ಉದ್ದೇಶಪೂರ್ವಕವಾಗಿ ಅದನ್ನು ಮಧ್ಯದಲ್ಲೇ ತಡೆಯುವಂತೆ ಆಗ್ರಹಪಡಿಸಿದ್ದಾರೆ ಎಂದು ದೂರಿನಲ್ಲಿ ದೂರಲಾಗಿದೆ.

ಕಾನೂನು ಉಲ್ಲಂಘನೆ: ಈ ಕೃತ್ಯವು ಸಾರ್ವಜನಿಕವಾಗಿ ಶಾಂತಿಭಂಗವನ್ನು ಉಂಟುಮಾಡಲು ನಡೆಸಿರುವ ಸಂಚಾಗಿದೆ. ಇದು “Prevention of Insults to National Honour (Amendment) Bill, 2026” ರ ಸೆಕ್ಷನ್-3 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 352 ರ ಪ್ರಕಾರ ಅಪರಾಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರತಿಪಾದಿಸಿದೆ.

ಸಾಕ್ಷ್ಯ ಸಲ್ಲಿಕೆ: ಗಣರಾಜ್ಯೋತ್ಸವ/ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಈ ದೃಶ್ಯಾವಳಿಗಳು ಯೂಟ್ಯೂಬ್ ಹಾಗೂ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿ, ಅದರ ಲಿಂಕ್ ಹಾಗೂ ಜಿಯೋ-ಟ್ಯಾಗ್ಡ್ ವಿವರಗಳೊಂದಿಗೆ ಸಾಕ್ಷ್ಯವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಜಂಟಿ ದೂರು ಸಲ್ಲಿಸಿದ ಪ್ರಮುಖರು:

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದ ಅಧಿಕೃತ ಪತ್ರದ ಮುಖೇನ ಸಲ್ಲಿಕೆಯಾಗಿರುವ ಈ ಜಂಟಿ ದೂರಿಗೆ  ಸಿ. ದೀಪಕ್ ಕುಮಾರ್ (ರಾಜ್ಯ ಕಾರ್ಯದರ್ಶಿ, ಯುವ ಮೋರ್ಚಾ, ಬಿಜೆಪಿ ಕರ್ನಾಟಕ),ಸಂದೀಪ್ ರವಿ (ರಾಜ್ಯ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ, ಬಿಜೆಪಿ ಕರ್ನಾಟಕ),ಧೀರಜ್ ಮುನಿರಾಜು (ಶಾಸಕರು ಹಾಗೂ ರಾಜ್ಯ ಅಧ್ಯಕ್ಷರು, ಯುವ ಮೋರ್ಚಾ, ಬಿಜೆಪಿ ಕರ್ನಾಟಕ),ಜಗದೀಶ್ ಚಂದ್ರ (ಜಿಲ್ಲಾ ಅಧ್ಯಕ್ಷರು, ಯುವ ಮೋರ್ಚಾ, ಬೆಂಗಳೂರು ಕೇಂದ್ರ) ಸಹಿ ಹಾಕಿದ್ದಾರೆ.

ದೇಶದ ಸಂಸ್ಕೃತಿ ಮತ್ತು ರಾಷ್ಟ್ರೀಯ ಸಂಕೇತಗಳಿಗೆ ಧಕ್ಕೆ ತಂದಿರುವ ಸೋನಿಯಾ ಗಾಂಧಿ ಅವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವ ಮೋರ್ಚಾ ಮುಖಂಡರು ಒತ್ತಾಯಿಸಿದ್ದಾರೆ.

 

 


Share this with Friends

Related Post