ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸತತ ಆರು ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊತ್ತು ನಾಡಿನ ವೈಭವವನ್ನು ಹೆಚ್ಚಿಸಿರುವ ಗಜಪಡೆ ನಾಯಕ, 60 ವರ್ಷದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯೂ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ವಿಶೇಷ ಅವಕಾಶ ಕಲ್ಪಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ಈ ಕುರಿತು ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ ಅರಣ್ಯ ಖಾತೆಯನ್ನು ಈ ಹಿಂದೆ ನಿರ್ವಹಣೆ ಮಾಡಿದ ಅನುಭವದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಜಗಾಂಭೀರ್ಯದ ಹೀರೊ ‘ಅಭಿಮನ್ಯು’
ತನ್ನ ಗಜಗಾಂಭೀರ್ಯ ಹಾಗೂ ಶಾಂತ ಸ್ವಭಾವದಿಂದ ನಾಡಿನ ಲಕ್ಷಾಂತರ ಜನರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಅಭಿಮನ್ಯು, ಕೇವಲ ದಸರಾ ಆನೆಯಷ್ಟೇ ಅಲ್ಲ. ರಾಜ್ಯಾದ್ಯಂತ ನಡೆದಿರುವ ಕಠಿಣ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿದ್ದ ಧೀರ ಆನೆಯಾಗಿದೆ. ಇದುವರೆಗೆ 300ಕ್ಕೂ ಹೆಚ್ಚು ಆನೆ ಸೆರೆ ಹಾಗೂ 80ಕ್ಕೂ ಹೆಚ್ಚು ಕಾಡುಹಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ಭಾಗವಹಿಸಿರುವ ಅಪ್ರತಿಮ ದಾಖಲೆಯನ್ನು ಅಭಿಮನ್ಯು ಹೊಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಅರ್ಜುನ-ಬಲರಾಮ’ ಅವರಂತೆ ಸಿಗಲಿ ಗೌರವ
ಹಿಂದಿನ ದಸರಾ ಮಹೋತ್ಸವಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಜನಮನ ಗೆದ್ದಿದ್ದ ‘ಅರ್ಜುನ’ ಮತ್ತು ‘ಬಲರಾಮ’ ಆನೆಗಳಿಗೆ ನಿವೃತ್ತಿಯ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ವಿಶೇಷ ಮರ್ಯಾದೆ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿ ಅಭಿಮನ್ಯುವಿಗೂ ಅತ್ಯುನ್ನತ ಗೌರವ ಸಿಗಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ನಿಶಾನೆ ಆನೆಯಾಗಿ ರಾಜೋಚಿತ ಬೀಳ್ಕೊಡುಗೆಗೆ ಆಗ್ರಹ
ಲಕ್ಷಾಂತರ ದಸರಾ ಅಭಿಮಾನಿಗಳ ಭಾವನೆಗಳಿಗೆ ಅರಣ್ಯ ಇಲಾಖೆ ಸ್ಪಂದಿಸಬೇಕು. ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯುವನ್ನು ‘ನಿಶಾನೆ ಆನೆ’ಯಾಗಿ (Nishane Elephant) ಭಾಗವಹಿಸಲು ಅವಕಾಶ ನೀಡಬೇಕು. ಆ ಮೂಲಕ ಆತನ ಸುದೀರ್ಘ ಸೇವೆಗೆ ಅತ್ಯಂತ ಗೌರವಪೂರ್ವಕವಾಗಿ ಮತ್ತು ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಈಶ್ವರ ಖಂಡ್ರೆ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.

