Wed. Aug 19th, 2026

ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ: 23.14 ಲಕ್ಷ ಸಂದೇಹಾಸ್ಪದ ಫಲಾನುಭವಿಗಳ ಪಿಂಚಣಿ ಮುಂದುವರಿಕೆಗೆ ಸರ್ಕಾರ ಆದೇಶ!

Share this with Friends

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.ಕುಟುಂಬ ದತ್ತಾಂಶದ ಪರಿಶೀಲನೆ ವೇಳೆ ‘ಸಂದೇಹಾಸ್ಪದ’ ಎಂದು ಗುರುತಿಸಲಾಗಿದ್ದ ಸುಮಾರು 23.14 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಪಿಂಚಣಿಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಏನಿದು ಸಂದೇಹಾಸ್ಪದ ಪಿಂಚಣಿ ವಿವಾದ?

ಕುಟುಂಬ ದತ್ತಾಂಶದ (Kutumba Database) ಮಾಹಿತಿಗಳನ್ನು ರಾಜ್ಯದ ಪಿಂಚಣಿ ಫಲಾನುಭವಿಗಳ ಮಾಹಿತಿಯೊಂದಿಗೆ ತಾಳೆ ಮಾಡಿದಾಗ, ರಾಜ್ಯದಲ್ಲಿ ಒಟ್ಟು 23,14,544 ಫಲಾನುಭವಿಗಳ ಮಾಹಿತಿ ಸಂದೇಹಾಸ್ಪದ ಎಂದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು (VAO) ‘ಸಂಯೋಜನೆ ಮೊಬೈಲ್ ಆಪ್’ ಮೂಲಕ ಭೌತಿಕ ಪರಿಶೀಲನೆ ನಡೆಸಿದಾಗ, ನಿಗದಿತ ವಿಳಾಸದಲ್ಲಿ ವಾಸವಿಲ್ಲದಿರುವುದು, ವಾರ್ಷಿಕ ಆದಾಯ ದೃಢೀಕರಣ ಪತ್ರ ಹಾಜರುಪಡಿಸದ ಕಾರಣ ಒಟ್ಟು 18,06,032 ಸಂದೇಹಾಸ್ಪದ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಆದಾಯ ಮಿತಿ ಪರಿಶೀಲನೆ ಮತ್ತು ಸರ್ಕಾರದ ಹೊಸ ನಿರ್ಧಾರ:

ಭೌತಿಕ ಪರಿಶೀಲನೆಯ ಸಮಯದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ:

ಪಿಂಚಣಿ ಸ್ಥಗಿತಗೊಂಡಿದ್ದ ಫಲಾನುಭವಿಗಳ ಪೈಕಿ ಹಲವರ ವಾರ್ಷಿಕ ಆದಾಯವು ₹32,000/- ಕ್ಕಿಂತ ಹೆಚ್ಚು ಹಾಗೂ ₹1,20,000/- ರ ಒಳಗಿನ ಮಿತಿಯಲ್ಲಿರುವುದು ಕಂಡುಬಂದಿದೆ.

ಈ ವರ್ಗದ ಬಡ ಮತ್ತು ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಮಾನ್ಯ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಆದೇಶದ ಮೇರೆಗೆ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಇಲಾಖೆಯ ಅಧಿಕೃತ ಆದೇಶ:

ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯದಲ್ಲಿ ಕಂಡು ಬಂದಿರುವ 23,14,544 ಸಂದೇಹಾಸ್ಪದ ಫಲಾನುಭವಿಗಳ ಪೈಕಿ, ಭೌತಿಕ ಪರಿಶೀಲನೆ ಬಾಕಿ ಇರುವ ಹಾಗೂ ಪರಿಶೀಲನೆಯ ನಂತರ ₹32,000/- ದಿಂದ ₹1,20,000/- ಗಳ ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲು ಸರ್ಕಾರ ಹಸಿರು ನಿಶಾನೆ ನೀಡಿದೆ .ಈ ನಿರ್ಧಾರದಿಂದಾಗಿ ತಾಂತ್ರಿಕ ಕಾರಣಗಳಿಂದ ಪಿಂಚಣಿ ವಂಚಿತರಾಗಿದ್ದ ಲಕ್ಷಾಂತರ ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲ ಫಲಾನುಭವಿಗಳಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.


Share this with Friends

Related Post