ಬೆಂಗಳೂರು: ಬಿಸಿಲ ಬೇಗೆಯಿಂದ ರಾಜ್ಯಕ್ಕೆ ವರುಣ ತಂಪೆರೆಯಲಿದ್ದಾನೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದ ಹಲವು ಜಿಲ್ಲ್ಗಳಲ್ಲಿ ಮುಂದಿನ ಒಂದು ವಾರ ಗುಡುಗು ಮಿಂಚುಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಎನ್ನಲಾಗಿದೆ.
ಈಗಾಗಲೇ ಕೊಡಗು, ಕಲಬುರಗಿ, ರಾಯಚೂರು ಜಿಲ್ಲೆಯ ಕೆಲವೆಡೆ ಸೋಮವಾರ ಬಿರುಸಿನ ಮಳೆಯಾಗಿದೆ. ಮಡಿಕೇರಿ ಹಾಗೂ ಕುಶಾಲನಗರ, ವಿರಾಜಪೇಟೆ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ಬಿಸಿಲ ಧಗೆಯಿಂದ ನಲುಗಿದ್ದ ಜನರು ನಿಟ್ಟುಸಿರುಬಿಟ್ಟರು. ಮಳೆಯಿಂದಾಗಿ ಕಾಫಿ ತೋಟಗಳಿಗೆ ಅನುಕೂಲವಾಗಿದ್ದು, ಬೆಳೆಗಾರರು ಸಂತಸಗೊಂಡಿದ್ದಾರೆ. ಸೋಮವಾರ ಸಂಜೆ ಹೊತ್ತಿಗೆ ಬೀದರ್ ಜಿಲ್ಲೆಯ ಹಲವೆಡೆ ಮತ್ತು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣ ಕಂಡಿತು.
ಮಾ.23 ಮತ್ತು ಮಾ.24ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಾ.19ರಿಂದ ಮುಂದಿನ ಮೂರು ದಿನ ಬೀದರ್ನಲ್ಲಿ ವರ್ಷಧಾರೆಯಾಗಲಿದೆ. ಮಾ.19ರಂದು ಕಲಬುರಗಿ, ಮಾ.21ರಂದು ಕೊಪ್ಪಳ, ರಾಯಚೂರು, ಮಾ.19ರಿಂದ ಮುಂದಿನ ಮೂರು ದಿನ ಕೊಡಗು ಮತ್ತು ಮೈಸೂರಿನಲ್ಲಿ ಸಾಧಾರಣ ಮಳೆ ಬೀಳಲಿದೆ. ಮಾ.22ರಿಂದ ಮುಂದಿನ ಎರಡು ದಿನ ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ವಿಜಯನಗರದಲ್ಲಿ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.