Thu. Aug 20th, 2026

ಸ್ವಂತ ಬೆಂಬಲಿಗರಿಗೇ ಶಾಕ್ ನೀಡಿದ ಕೃಷ್ಣ ಬೈರೇಗೌಡ: ಸಚಿವರ ಪೋಸ್ಟರ್ ಅಂಟಿಸಿದವರ ಮೇಲೆಯೇ ಬಿತ್ತು 3 ಎಫ್‌ಐಆರ್!

Share this with Friends

ಬೆಂಗಳೂರು:ರಾಜಕೀಯ ನಾಯಕರನ್ನು ಪ್ರಸನ್ನಗೊಳಿಸಲು ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ನಗರದಾದ್ಯಂತ ಅಕ್ರಮ ಪೋಸ್ಟರ್, ಬ್ಯಾನರ್‌ಗಳನ್ನು ಅಂಟಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದು ತೀರಾ ಸಾಮಾನ್ಯ. ಆದರೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಸಚಿವ ಕೃಷ್ಣ ಬೈರೇಗೌಡ ಅವರು ಈ “ಬ್ಯಾನರ್ ಸಂಸ್ಕೃತಿ”ಗೆ ತಾವೇ ಖುದ್ದಾಗಿ ಬ್ರೇಕ್ ಹಾಕುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ತಮ್ಮದೇ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದವರ ವಿರುದ್ಧ ಸಚಿವರು ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಿದ್ದಾರೆ. ಸಚಿವರ ಯಾವುದೇ ಪೂರ್ವ ಅನುಮತಿ ಇಲ್ಲದೆ ಈ ಕೃತ್ಯ ಎಸಗಿದ್ದರಿಂದ, ಜಿಬಿಎ (GBA) ಅಧಿಕಾರಿಗಳು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಅಧಿನಿಯಮ ಕಾಯ್ದೆಯಡಿ ಈಗಾಗಲೇ 3 ಪ್ರತ್ಯೇಕ ಎಫ್‌ಐಆರ್‌ಗಳನ್ನು (FIR) ದಾಖಲಿಸಿದ್ದಾರೆ. ರಾಜಕೀಯ ವರ್ಚಸ್ಸಿಗಿಂತ ನಿಯಮಗಳೇ ಮುಖ್ಯ ಎಂಬುದನ್ನು ಸಚಿವರು ಸಾಬೀತುಪಡಿಸಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ ಎಂದ ಸಚಿವ:

ಈ ಇಡೀ ರಾಜಕೀಯ ಬೆಳವಣಿಗೆಯ ಕುರಿತು ಖಡಕ್ ಆಗಿ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ ಅವರು, “ಅಂಟಿಸಿರುವ ಪೋಸ್ಟರ್‌ಗಳು ನನ್ನದೇ ಆಗಿದ್ದರೂ ಸಹ, ನಿಯಮ ಉಲ್ಲಂಘನೆಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ಕಾನೂನು ಎನ್ನುವುದು ಎಲ್ಲರಿಗೂ ಒಂದೇ” ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮದೇ ಪಕ್ಷದ ಕಾರ್ಯಕರ್ತರಿಗೂ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಸಚಿವರ ಈ ಕಠಿಣ ನಿಲುವಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆಯ ಸಿಬ್ಬಂದಿ, ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗೋಡೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ರಾರಾಜಿಸುತ್ತಿದ್ದ ಕೃಷ್ಣ ಬೈರೇಗೌಡ ಅವರ ಎಲ್ಲಾ ಪೋಸ್ಟರ್‌ಗಳನ್ನು ಸಂಪೂರ್ಣವಾಗಿ ಹರಿದು ಹಾಕಿ, ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೈಕಮಾಂಡ್ ಮತ್ತು ಸಾರ್ವಜನಿಕ ವಲಯದಲ್ಲಿ ಸಚಿವರ ಈ ಸ್ವಚ್ಛ ಆಡಳಿತದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Share this with Friends

Related Post