ಬೆಂಗಳೂರು:ರಾಜ್ಯದಲ್ಲಿ ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜಕೀಯ ವಾಗ್ದಾಳಿಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಚ್. ಸುರೇಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹೊಸದೊಂದು ಸೈದ್ಧಾಂತಿಕ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ. ರಾಷ್ಟ್ರಭಕ್ತಿ ಗೀತೆಯ ನಂತರ ಈಗ ಕರ್ನಾಟಕದ ಹೆಮ್ಮೆಯ ‘ನಾಡಗೀತೆ’ಯನ್ನು ಮುಂದಿಟ್ಟುಕೊಂಡು ಅವರು ಆಡಳಿತಾರೂಢ ಕಾಂಗ್ರೆಸ್ ನಿಲುವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕರು ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಡುವುದನ್ನು ಬಹಿಷ್ಕರಿಸುತ್ತಿದ್ದಾರೆ ಎಂಬ ಹಿನ್ನೆಲೆಯನ್ನು ಪ್ರಸ್ತಾಪಿಸಿರುವ ಸುರೇಶ್ ಕುಮಾರ್, “ಕಾಂಗ್ರೆಸ್ ಪಕ್ಷವು ನಮ್ಮ ಹೆಮ್ಮೆಯ ನಾಡಗೀತೆಯನ್ನೂ ಸಹ ಪೂರ್ಣವಾಗಿ ಹೇಳಲು ನಿರಾಕರಿಸುತ್ತದೆಯೇ?” ಎಂದು ಸಾಮಾಜಿಕ ಜಾಲತಾಣದ ಮೂಲಕ ನೇರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ನಾಡಗೀತೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಾಡಿನ ಸೌಹಾರ್ದತೆಯನ್ನು ಬಿಂಬಿಸುವ ಸಾಲುಗಳಿರುವುದೇ ಇದಕ್ಕೆ ಕಾರಣವೇ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ನಾಡಿನ ರಸಋಷಿಗಳ ಹೆಸರು ಉಲ್ಲೇಖ:
ತಮ್ಮ ವಾದಕ್ಕೆ ಪೂರಕವಾಗಿ ಕುವೆಂಪು ವಿರಚಿತ ನಾಡಗೀತೆಯ ಆಳವನ್ನು ನೆನಪಿಸಿರುವ ಅವರು, ನಮ್ಮ ನಾಡಗೀತೆಯಲ್ಲಿ ಜಗತ್ತಿಗೆ ಬೆಳಕಾದ ಮಹಾನ್ ರಸಋಷಿಗಳು, ಭೂದೇವಿ, ರಾಘವ, ಮಧುಸೂಧನ, ಕಪಿಲ, ಪತಂಜಲಿ, ಗೌತಮ ಮತ್ತು ಜಿನರ ಹೆಸರುಗಳಿವೆ. ಅಷ್ಟೇ ಅಲ್ಲದೆ ವೇದ ಧರ್ಮ, ಜನಕ, ಶಂಕರ, ರಾಮಾನುಜ, ವಿದ್ಯಾರಣ್ಯ, ಜಗದ್ಗುರು ಬಸವೇಶ್ವರ, ಮಧ್ವಾಚಾರ್ಯ, ಗುರು ನಾನಕ, ಸಂತ ಕಬೀರ, ಚೈತನ್ಯ ಮಹಾಪ್ರಭು ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರಂತಹ ಸರ್ವಧರ್ಮ ಸಮನ್ವಯತೆಯ ದಾರ್ಶನಿಕರ ಹೆಸರುಗಳು ಸಾಲು ಸಾಲಾಗಿ ಇವೆ ಎಂದು ಪಟ್ಟಿ ಮಾಡಿದ್ದಾರೆ. ಇಷ್ಟೆಲ್ಲಾ ಸನಾತನ ಹಾಗೂ ಸಾಂಸ್ಕೃತಿಕ ಇತಿಹಾಸವಿರುವ ಗೀತೆಯನ್ನು ಪೂರ್ಣವಾಗಿ ಒಪ್ಪಲು ಕಾಂಗ್ರೆಸ್‌ಗೆ ಯಾಕೆ ಹಿಂಜರಿಕೆ ಎಂದು ಸುರೇಶ್ ಕುಮಾರ್ ಕುಟುಕಿದ್ದಾರೆ. ಸಚಿವರ ಈ ಪೋಸ್ಟ್ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

