Fri. Aug 21st, 2026

ಕರಾವಳಿ ಕರಾವಳಿ ನಿವಾಸಿಗಳ ದಶಕಗಳ ಕನಸು ನನಸು: ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು ಸೇರ್ಪಡೆ!

Share this with Friends

ಬೆಂಗಳೂರು: ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರು ಹಾಗೂ ವಿವಿಧ ಸಂಘಟನೆಗಳ ದಶಕಗಳ ಹಳೆಯದಾದ ಮತ್ತು ಅತ್ಯಂತ ಪ್ರಮುಖವಾದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ಸಂಪೂರ್ಣವಾಗಿ ನೈಋತ್ಯ ರೈಲ್ವೆ (SWR) ವಲಯದ ವ್ಯಾಪ್ತಿಗೆ ಒಳಪಡಿಸುವ ಐತಿಹಾಸಿಕ ನಿರ್ಧಾರವನ್ನು ಭಾರತೀಯ ರೈಲ್ವೆ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.

ಈ ಮಹತ್ವದ ತೀರ್ಮಾನದಿಂದಾಗಿ ಇನ್ಮುಂದೆ ಮಂಗಳೂರು ರೈಲ್ವೆ ಪ್ರದೇಶದ ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಆಗಿರಲಿದ್ದು, ವಲಯ ಪ್ರಧಾನ ಕಚೇರಿಯು ಹುಬ್ಬಳ್ಳಿಯಾಗಲಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಕರಾವಳಿ ಭಾಗದ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮೂರು ವಲಯಗಳ ಹಂಚಿಕೆಗೆ ಮುಕ್ತಿ:

ಇಲ್ಲಿಯವರೆಗೆ ಮಂಗಳೂರು ರೈಲ್ವೆ ವ್ಯಾಪ್ತಿಯು ದಕ್ಷಿಣ ರೈಲ್ವೆ (ಪಾಲಕ್ಕಾಡ್ ವಿಭಾಗ), ನೈಋತ್ಯ ರೈಲ್ವೆ ಮತ್ತು ಕೊಂಕಣ್ ರೈಲ್ವೆ ಹೀಗೆ ಮೂರು ಪ್ರತ್ಯೇಕ ವಲಯಗಳಲ್ಲಿ ಹಂಚಿಹೋಗಿತ್ತು. ಇದರಿಂದಾಗಿ ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗುತ್ತಿರುವುದಲ್ಲದೆ, ಕರ್ನಾಟಕದ ಕರಾವಳಿಗೆ ಹೊಸ ರೈಲುಗಳ ಸೇರ್ಪಡೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮಯದ ಹೊಂದಾಣಿಕೆಯಲ್ಲಿ ಭಾರಿ ಹಿನ್ನಡೆಯಾಗುತ್ತಿತ್ತು. ಈಗ ಒಂದೇ ವಲಯದ ಅಡಿಯಲ್ಲಿ ಆಡಳಿತ ಸಂಯೋಜನೆಗೊಂಡಿರುವುದರಿಂದ ಸ್ಥಳೀಯ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಮತ್ತು ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಇದು ಕರಾವಳಿಯ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟಿಗೆ ಭಾರಿ ಶಕ್ತಿ ತುಂಬಲಿದೆ ಎಂದು ವಿ. ಸೋಮಣ್ಣ ವಿವರಿಸಿದ್ದಾರೆ.

ಕ್ಯಾಪ್ಟನ್ ಬ್ರಿಜೇಶ್ ಚೌಟ ಕಸರತ್ತಿಗೆ ಜಯ:

ಕಳೆದ 2024ರ ಜುಲೈ ತಿಂಗಳಲ್ಲಿ ಸಚಿವ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಸ್ಥಳೀಯ ರೈಲು ಬಳಕೆದಾರರ ಮಂಡಳಿ ಈ ಗಂಭೀರ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಸೋಮಣ್ಣ ಅವರು, ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ಕೊಂಕಣ್ ರೈಲ್ವೆಯ ಉನ್ನತ ಮಟ್ಟದ ಪ್ರಧಾನ ವ್ಯವಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿಶೇಷ ಸಭೆ ನಡೆಸಿ ವರದಿ ಸಿದ್ಧಪಡಿಸಿದ್ದರು. ಈ ಸುದೀರ್ಘ ಪ್ರಸ್ತಾವನೆಗೆ ಈಗ ರೈಲ್ವೆ ಮಂಡಳಿ ಹಸಿರು ನಿಶಾನೆ ನೀಡಿದ್ದು, ಕರ್ನಾಟಕದ ಆರ್ಥಿಕ ಪ್ರಗತಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರಿಗೆ ದೊಡ್ಡ ಆಡಳಿತಾತ್ಮಕ ಬಲ ಸಿಕ್ಕಂತಾಗಿದೆ.

 

 


Share this with Friends

Related Post