ಚಾಮರಾಜನಗರ, ಮಾ.19: ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆದ ಲೋಕ್ ಅದಾಲತ್ ಬಿನ್ನಭಿಪ್ರಾಯ ಮರೆತು ದಂಪತಿ ಮತ್ತೆ ಒಂದಾದ ಪ್ರಸಂಗಕ್ಕೆ ಸಾಕ್ಷಿಯಾಯಿತು.
ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಕೌಟುಂಬಿಕ ಮಹಿಳಾ ದೌರ್ಜನ್ಯ ಸಂರಕ್ಷಣಾ ಕಾಯ್ದೆಯಡಿ ಅಂಬಳೆ ಗ್ರಾಮದ ಎಂ. ಚಂದ್ರಕಲಾ ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದ ರಘು ಎಂಬವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಯಳಂದೂರಿನ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್‍ನಲ್ಲಿ ಈ ಪ್ರಕರಣದಲ್ಲಿನ ದಂಪತಿ ಎಲ್ಲಾ ಭಿನ್ನಾಭಿಪ್ರಾಯ ಮರೆತು ಸಾಂಸಾರಿಕ ಜೀವನ ನಡೆಸುವುದಾಗಿ ಒಪ್ಪಿಕೊಂಡಿದ್ದು ವಿಶೇಷವಾಗಿತ್ತು.
ಪ್ರತ್ಯೇಕವಾಗಿದ್ದ ದಂಪತಿ ಒಂದಾಗುವಂತೆ ಮಾಡಿದ್ದು ಲೋಕ್ ಅದಾಲತ್‍ನ ಪ್ರಮುಖ ವಿಶೇಷ.
ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ರಾಜಿಯೋಗ್ಯ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇದ್ದ ರಾಜಿಯೋಗ್ಯ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಈ ವೇಳೆ ತಿಳಿಸಿದರು.
ಚಾಮರಾಜನಗರ ಜಾಲಹಳ್ಳಿಹುಂಡಿ ಹೊಸ ಬಡಾವಣೆ ನಿವಾಸಿ ಇಂದ್ರಾಣಿ ಎಂಬುವರು ಅವರ ಪತಿ ಶಿವಮಲ್ಲೇಶ ಹಾಗೂ ಅತ್ತೆ, ಮಾವ, ಮೈದುನರ ವಿರುದ್ಧ ಕಿರುಕುಳ, ಅವಾಚ್ಯ ಶಬ್ದಗಳಿಂದ ನಿಂದನೆ, ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಲ್ಲೆ ಹಿಂಸೆ ನೀಡುತ್ತಿದ್ದಾರೆಂಬ ಸಂಬಂಧ ವ್ಯಾಜ್ಯಪೂರ್ವ ಪ್ರಕರಣವನ್ನು ದಾಖಲಿಸಿದ್ದರು.
ಈ ಪ್ರಕರಣವು ಲೋಕ್ ಅದಾಲತ್‍ನಲ್ಲಿ ಒಮ್ಮತವಾಗಿ ಇತ್ಯರ್ಥಗೊಂಡಿತು. ಇನ್ನುಮುಂದೆ ದಂಪತಿಗಳು ಯಾವುದೇ ಮನಸ್ತಾಪವಿಲ್ಲದೆ ಸಾಂಸಾರಿಕ ಜೀವನ ನಡೆಸಿಕೊಂಡು ಹೋಗುವುದಾಗಿ ಒಪ್ಪಿ ಒಂದಾಗಿದ್ದು ಸಹ ರಾಷ್ಟ್ರೀಯ ಲೋಕ್ ಅದಾಲತ್‍ನ ಮತ್ತೊಂದು ವಿಶೇಷವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ತಿಳಿಸಿದ್ದಾರೆ.