Mon. Dec 23rd, 2024

ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ-ಪ್ರಧಾನಿಗೆ ಸಿದ್ದು ಚಾಟಿ

Share this with Friends

ಬೆಂಗಳೂರು,ಮಾ.19: ಬಂಡುಕೋರ ನಾಯಕ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ವೀಕ್ ಪಿಎಂ ಅಲ್ಲದೆ ಮತ್ತೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ನಾನು ವೀಕ್ ಪಿಎಂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ವೀಕ್ ಪಿಎಂ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ವೀಕ್ ಪಿಎಂ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ ಸಿದ್ದು.

ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದಿಲಿ ಹೊಡೆದಾಡಿಕೊಳ್ಳುತ್ತಿದ್ದಾರೆ, ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ವೀಕ್ ಪಿಎಂ ಆಗಿರುವುದಲ್ಲವೇ ಎಂದು ಚಾಟಿ ಬಳಸಿದ್ದಾರೆ.

ಶಿವಮೊಗ್ಗದಲ್ಲಿ ನೀವು ಪಕ್ಷದ ಪ್ರಚಾರ ಸಭೆ ನಡೆಸುತ್ತಿದ್ದಾಗ ಬಂಡುಕೋರ ನಾಯಕ ಈಶ್ವರಪ್ಪನವರು ಕೂಗಳತೆ ದೂರದ ತಮ್ಮ ಮನೆಯಲ್ಲಿದ್ದರೂ ಕ್ಯಾರೇ ಅನ್ನದೆ ಸಭೆಗೆ ಗೈರು ಹಾಜರಾಗಿದ್ದರು ಅಲ್ಲದೆ ನಿರಂತರವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ವೀಕ್ ಪಿಎಂ ಅಲ್ಲದೆ ಮತ್ತೇನು ಎಂದು ಸಿದ್ದರಾಮಯ್ಯ ಕೆಣಕ್ಕಿದ್ದಾರೆ.


Share this with Friends

Related Post