Fri. Nov 1st, 2024

ಲೋಕಸಭೆ ಚುನಾವಣೆ ಮೊದಲ ಹಂತಕ್ಕೆ ಅಧಿಸೂಚನೆ ಪ್ರಕಟ

Loksabha Elections 2024
Share this with Friends

ಹೊಸದಿಲ್ಲಿ.ಮಾ,20 : 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸಂಸತ್ ಕ್ಷೇತ್ರಗಳಿಗೆ ಆರಂಭವಾಗಿದೆ. ಏಪ್ರಿಲ್ 19ರಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅದಕ್ಕೆ ಚುನಾವಣಾ ಆಯೋಗವು ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ 2024ನೇ ಸಾಲಿನ ಲೋಕಸಭೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಅಧಿಸೂಚನೆ ಪ್ರಕಾರ, ನಾಮಪತ್ರಗಳ ಸಲ್ಲಿಕೆಗೆ ಮಾರ್ಚ್ 27 ಕೊನೆಯ ದಿನವಾಗಿದೆ. ಆದರೆ ಹಬ್ಬದ ಕಾರಣದಿಂದ ಬಿಹಾರ ರಾಜ್ಯದಲ್ಲಿ ಮಾತ್ರ ಲೋಕಸಭೆ ಚುನಾವಣೆಯ ಸೀಟುಗಳಿಗೆ ನಾಮಪತ್ರ ಸಲ್ಲಿಸುವ ಗಡುವನ್ನು ಮಾರ್ಚ್ 28ರವರೆಗೂ ನೀಡಲಾಗಿದೆ. ಬಿಹಾರದ 40 ಲೋಕಸಭೆ ಕ್ಷೇತ್ರಗಳ ಪೈಕಿ 4 ಸೀಟುಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಉಳಿದ ರಾಜ್ಯಗಳಲ್ಲಿ ಮಾರ್ಚ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದರೆ, ಬಿಹಾರದಲ್ಲಿ ಮಾತ್ರ ಮಾರ್ಚ್ 30ರಂದು ನಿಗದಿಯಾಗಿದೆ. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಮಾರ್ಚ್ 30 ಕೊನೆಯ ದಿನವಾಗಿದೆ. ಬಿಹಾರದಲ್ಲಿ ಏಪ್ರಿಲ್ 2ರಂದು ಕಡೆಯ ದಿನ. ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದರ ಜತೆಗೆ ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯ ಪ್ರದೇಶದಲ್ಲಿ 6 ಸೀಟುಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದ ತಲಾ 5, ಬಿಹಾರದ 4, ಪಶ್ಚಿಮ ಬಂಗಾಳದ 3, ಅರುಣಾಚಲ ಪ್ರದೇಶ, ಮಣಿಪುರ ಹಾಗೂ ಮೇಘಾಲಯದ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಹಾಗೂ ಪುದುಚೆರಿಯ ತಲಾ 1 ಸ್ಥಾನಗಳಿಗೆ ಏಪ್ರಿಲ್ 19ರಂದು ಚುನಾವಣೆ ನಡೆಯಲಿದೆ.

ಏಪ್ರಿಲ್ 26ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಇದರಲ್ಲಿ ಕರ್ನಾಟಕದ ಕೆಲವು ಲೋಕಸಭೆ ಕ್ಷೇತ್ರಗಳು ಒಳಗೊಂಡಿವೆ. ಬಳಿಕ ಮೇ 7, ಮೇ 13, ಮೇ 20, ಮೇ 25 ಹಾಗೂ ಜೂನ್ 1ರಂದು ಉಳಿದ ಹಂತಗಳ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸಭೆಗೂ ಚುನಾವಣೆ :
ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆಗೂ ಇದೇ ವೇಳೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಲೋಕಸಭೆಯ ಮೊದಲ ಹಂತದ ಮತದಾನವಾದ ಏಪ್ರಿಲ್ 19ಕ್ಕೆ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಈ ಎರಡೂ ರಾಜ್ಯಗಳ ಫಲಿತಾಂಶವು ಜೂನ್ 2ರಂದು ಪ್ರಕಟವಾಗಲಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಮೇ 13ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶವು ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುವ ಜೂನ್ 4ರಂದು ಹೊರಬೀಳಲಿದೆ.


Share this with Friends

Related Post