Thu. Oct 1st, 2026

ವಿಧಾನಸೌಧದ ಮುಂದೆ ಉರ್ದು ಹಬ್ಬದ ಹುಚ್ಚಾಟ ನಿಲ್ಲಿಸಿ, ಇಲ್ಲದಿದ್ದರೆ ಚಳಿ ಬಿಡಿಸಬೇಕಾಗುತ್ತದೆ: ಕರವೇ ಎಚ್ಚರಿಕೆ

Share this with Friends

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸಲು ಮುಂದಾಗಿರುವ ನಿರ್ಧಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಡೆಯನ್ನು ‘ಅವಿವೇಕದ ಹಾಗೂ ಅಪ್ರಬುದ್ಧ ನಿರ್ಧಾರ’ ಎಂದು ಕರೆದಿರುವ ಅವರು, ಈ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸರಣಿ ಆಕ್ರೋಶ ಹೊರಹಾಕಿರುವ ಕರವೇ ಅಧ್ಯಕ್ಷರು, “ರಾಜ್ಯ ಸರ್ಕಾರವೇ ಸ್ವತಃ ಮುಂದೆ ನಿಂತು ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವಂತೆ ಕಾಣುತ್ತಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರದ ನಿಲುವು ಇದಾಗಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.

ಭಾಷಾ ಸಂಘರ್ಷಕ್ಕೆ ಹುನ್ನಾರ:

“ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಮಾಡುವ ಅಗತ್ಯ ಏನಿತ್ತು? ಇದನ್ನು ಯಾರು ಕೇಳಿದ್ದರು?” ಎಂದು ಪ್ರಶ್ನಿಸಿರುವ ನಾರಾಯಣಗೌಡರು, “ಇದು ಕನ್ನಡಿಗರು ಮತ್ತು ಉರ್ದು ಭಾಷಿಕರ ನಡುವೆ ಅನಗತ್ಯವಾಗಿ ಒಡಕು ಮೂಡಿಸುವ ಮತ್ತು ಪರಸ್ಪರ ಎತ್ತಿಕಟ್ಟುವ ಹುನ್ನಾರವಾಗಿದೆ. ಈ ಹಿಂದೆ ಉರ್ದು ವಾರ್ತೆ ಪ್ರಸಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಕೋಮುಗಲಭೆಯ ಇತಿಹಾಸವನ್ನು ಸರ್ಕಾರ ಮರೆತಂತಿದೆ. ಇದು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ನಿರ್ಧಾರ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವನ್ನು ಮಾರಾಟ ಮಾಡುವ ಸಂಚು:

ಇದೇ ವೇಳೆ ಸರ್ಕಾರದ ದೂರದೃಷ್ಟಿಯಿಲ್ಲದ ನೀತಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಇಂದು ವಿಧಾನಸೌಧದ ಮುಂದೆ ಉರ್ದು ಹಬ್ಬ ಮಾಡಿದರೆ, ನಾಳೆ ಹಿಂದಿ ಹಬ್ಬ ಮಾಡುತ್ತಾರೆ. ತದನಂತರ ತಮಿಳು, ತೆಲುಗು, ಮರಾಠಿ ಹಬ್ಬಗಳನ್ನು ಆಚರಿಸಿ, ಕೊನೆಗೆ ಇಡೀ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಲು ಹೊರಟಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

ಮುಖ್ಯಮಂತ್ರಿಗಳಿಗೆ ಖಡಕ್ ಎಚ್ಚರಿಕೆ:

ಮುಖ್ಯಮಂತ್ರಿಗಳು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿರುವ ಅವರು, “ಸರ್ಕಾರಕ್ಕೆ ಮಾಡಲು ಜನಪರ ಕೆಲಸಗಳು ಸಾಕಷ್ಟಿವೆ. ಅದನ್ನು ಬಿಟ್ಟು ಇಂತಹ ಹುಚ್ಚಾಟಗಳಿಗೆ ಮುಂದಾಗಬಾರದು. ಇಂತಹ ವಿವಾದಾತ್ಮಕ ನಿರ್ಧಾರಗಳ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸುತ್ತಿರುವವರನ್ನು ಸರ್ಕಾರ ಮೊದಲು ದೂರ ಇಡಬೇಕು. ಇಲ್ಲದಿದ್ದರೆ ಕರವೇ ವತಿಯಿಂದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

“ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಸಾಕಷ್ಟು ಜಾಗಗಳಿವೆ. ಆದರೆ ನಾಡಿನ ಶಕ್ತಿಸೌಧವಾದ ವಿಧಾನಸೌಧವೇ ಅದಕ್ಕೆ ಬೇಕಾಗಿಲ್ಲ. ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ದುಸ್ಸಾಹಸಕ್ಕೆ ಇಳಿದರೆ, ಮುಂದೆ ಎದುರಾಗುವ ಭೀಕರ ಪರಿಣಾಮಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ” ಎಂದು ನಾರಾಯಣಗೌಡರು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post