Tue. Oct 6th, 2026

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ದುರ್ಬಳಕೆ: ಸರ್ಕಾರದ ವಜಾಕ್ಕೆ ಆರ್. ಅಶೋಕ್ ಆಗ್ರಹ

Share this with Friends

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ಆಡಳಿತಾರೂಢ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈ ಕುರಿತು ಅವರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸುದೀರ್ಘ ಮನವಿ ಸಲ್ಲಿಸಿದ್ದಾರೆ.

ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, “ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಬದಲಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ” ಎಂದು ಆರೋಪಿಸಿದರು. ಜಯನಗರ ಶಾಸಕರು ಸೇರಿದಂತೆ ರಾಜ್ಯದಾದ್ಯಂತ ವಿಪಕ್ಷಗಳ ಪ್ರಮುಖ ನಾಯಕರ ಮೇಲೆ ರಾಜಕೀಯ ದ್ವೇಷದ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದು ಅವರು ಟೀಕಿಸಿದರು.

ಚುನಾವಣಾ ಆಯೋಗದ ಭೇಟಿ:

ಇದೇ ಸಂದರ್ಭದಲ್ಲಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ‘ಫಾರ್ಮ್-7’ ಕುರಿತು ನಿನ್ನೆಯಷ್ಟೇ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಿರುವುದಾಗಿ ಅಶೋಕ್ ತಿಳಿಸಿದರು. “ಫಾರ್ಮ್-7 ಅನ್ನು ಯಾರು ಬೇಕಾದರೂ ಸಲ್ಲಿಸಬಹುದು ಎನ್ನುವುದು ಕಾನೂನು. ಆದರೆ ಪೊಲೀಸರು ಇದರಲ್ಲೂ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆಯೋಗವನ್ನು ಪ್ರಶ್ನಿಸಿದಾಗ, ತಾವು ಪೊಲೀಸರಿಗೆ ಯಾವುದೇ ಪ್ರಕರಣ ದಾಖಲಿಸಲು ಸೂಚಿಸಿಲ್ಲ ಎಂದು ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ” ಎಂದು ಅವರು ವಿವರಿಸಿದರು.

ಎನ್‌ಡಿಎ (NDA) ಮೈತ್ರಿಕೂಟ ಬಲಗೊಳ್ಳುತ್ತಿರುವುದನ್ನು ಸಹಿಸದ ರಾಜ್ಯ ಸರ್ಕಾರ, ಕಾನೂನನ್ನು ಕೈಗೆತ್ತಿಕೊಂಡು ಸಾಮೂಹಿಕ ದೂರುಗಳ ಮೂಲಕ ಕಿರುಕುಳ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿರುವ ಪ್ರಸ್ತುತ ಕಾಂಗ್ರೆಸ್ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಅವರು ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

ರಾಜ್ಯಪಾಲರ ಭೇಟಿಯ ನಿಯೋಗದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಅರಗ ಜ್ಞಾನೇಂದ್ರ, ಸಂಸದ ಪಿ.ಸಿ. ಮೋಹನ್, ಸಿ.ಟಿ. ರವಿ, ಭೋಜೇಗೌಡ, ಮುನಿರಾಜು ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರದಿಂದ ಕಾನೂನುಬಾಹಿರ ಕೃತ್ಯ: 

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪೊಲೀಸರನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದೆ ಎಂದು ಆಕ್ಷೇಪಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ‘ಫಾರ್ಮ್-7’ ಸಲ್ಲಿಕೆ ವಿಚಾರದಲ್ಲಿ ಉದ್ಭವಿಸಿರುವ ಗೊಂದಲಗಳ ಕುರಿತು ನಿನ್ನೆಯಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರು ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದೆ. “ಫಾರ್ಮ್-7 ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಚುನಾವಣಾ ಆಯೋಗ ಮತ್ತು ನಾಗರಿಕರ ನಡುವಿನ ವ್ಯವಹಾರವಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ಆಯೋಗವೇ ಸ್ಪಷ್ಟಪಡಿಸಿದೆ” ಎಂದು ನಾರಾಯಣಸ್ವಾಮಿ ವಿವರಿಸಿದರು.

ನಿಯಮಬಾಹಿರ ಎಫ್‌ಐಆರ್ ದಾಖಲು:

ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಕೇವಲ ಚುನಾವಣಾ ಆಯೋಗಕ್ಕೆ ಮಾತ್ರ ಇದೆ. ಆದರೆ, ಈ ಪ್ರಕ್ರಿಯೆಯ ಮಧ್ಯೆ ಸರ್ಕಾರವು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ, ಅರ್ಜಿ ಸಲ್ಲಿಸಿದವರ ವಿರುದ್ಧ ಸ್ವಯಂಪ್ರೇರಿತವಾಗಿ ಕಾನೂನುಬಾಹಿರವಾಗಿ ಎಫ್‌ಐಆರ್ ದಾಖಲಿಸುತ್ತಿದೆ ಎಂದು ಅವರು ಆರೋಪಿಸಿದರು. ಜನಪ್ರತಿನಿಧಿಗಳ ಕಾಯ್ದೆಯಡಿ ಯಾವುದೇ ಲೋಪಗಳಿದ್ದರೆ ಆಯೋಗವೇ ದೂರು ನೀಡಬೇಕೇ ಹೊರತು, ಪೊಲೀಸರು ನೇರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಅವರು ಕಾನೂನು ನಿಯಮಗಳನ್ನು ನೆನಪಿಸಿದರು.

ಗೃಹ ಸಚಿವರ ವಿರುದ್ಧ ವೀಕ್ಷಣೆ:

ರಾಜ್ಯದ ಗೃಹ ಇಲಾಖೆಯು ಸಂಪೂರ್ಣವಾಗಿ ದಿಕ್ಕೆಟ್ಟಿದೆ ಎಂದು ಟೀಕಿಸಿದ ಅವರು, ಗೃಹ ಸಚಿವರಿಗೆ ಇಲಾಖೆಯ ನಿರ್ವಹಣೆಯೇ ತಿಳಿಯುತ್ತಿಲ್ಲ. ಈಗಾಗಲೇ ಹಲವು ಪ್ರಕರಣಗಳಲ್ಲಿ ಕೋರ್ಟ್‌ನಿಂದ ಸರ್ಕಾರಕ್ಕೆ ಮುಖಭಂಗವಾಗಿದೆ. ಭವಿಷ್ಯದಲ್ಲಿ ಗೃಹ ಸಚಿವರೇ ಕಾನೂನು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಭವಿಷ್ಯ ನುಡಿದರು. ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ಮುಂದೂಡಿ, ಇಡೀ ಸರ್ಕಾರವೇ ಚುನಾವಣಾ ಕಚೇರಿ ಮುಂದೆ ಧರಣಿ ಕುಳಿತಿರುವುದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ಎಂದು ಅವರು ದೂರಿದರು.

ಸರ್ಕಾರದ ಈ ಎಲ್ಲಾ ದಬ್ಬಾಳಿಕೆ ಮತ್ತು ಕಾನೂನುಬಾಹಿರ ನಡವಳಿಕೆಗಳನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದ್ದು, ಅವರು ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

 


Share this with Friends

Related Post