ಬೆಂಗಳೂರು: ನೀರು ಸಿಗದೆ ವಿಫಲವಾದ ಹಾಗೂ ತೆರೆದ ಸ್ಥಿತಿಯಲ್ಲಿರುವ ಅಪಾಯಕಾರಿ ಕೊಳವೆಬಾವಿಗಳಿಂದ ಮಕ್ಕಳು ಮತ್ತು ಜಾನುವಾರುಗಳಿಗೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯಾದ್ಯಂತ ಶೀಘ್ರದಲ್ಲೇ ಅತ್ಯಂತ ಕಟ್ಟುನಿಟ್ಟಿನ ‘ಕೊಳವೆಬಾವಿ ಸುರಕ್ಷತಾ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಈ ಸಂಬಂಧ ಸಭೆ ನಡೆಸಿದ ಸಚಿವರು,ಈ ವಿಶೇಷ ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ಇಲಾಖಾವಾರು ಮಾಹಿತಿ ಸಂಗ್ರಹಣೆ ಹಾಗೂ ನಿರಂತರ ಮೇಲ್ವಿಚಾರಣೆಗೆ ಪೂರಕವಾದ ಸಮಗ್ರ ನೀಲನಕಾಶೆ ಸಿದ್ಧಪಡಿಸುವಂತೆ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಆದೇಶಿಸಿದರು.
ಸುಪ್ರೀಂ ಕೋರ್ಟ್ ಗೈಡ್ಲೈನ್ಸ್ ಪಾಲನೆ:
ಬಳಕೆಗೆ ಬಾರದ ಹಾಗೂ ವಿಫಲವಾದ ಬೋರ್ವೆಲ್ಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದಾಗ್ಯೂ, ದಾಖಲೆಗೆ ಸಿಗದೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ತೆರೆದಿಟ್ಟಿರುವ ಕೊಳವೆಬಾವಿಗಳು ಇರುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಹಂತ-ಹಂತವಾಗಿ ಪರಿಶೀಲನೆ:
ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದಲೇ ಕೊರೆಯಲಾದ ಎಲ್ಲಾ ವಿಫಲ ಕೊಳವೆಬಾವಿಗಳನ್ನು ಮರುಪರಿಶೀಲಿಸಿ, ಅವುಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ಇತರೆ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಜಾಗಗಳಲ್ಲಿರುವ ತೆರೆದ ಕೊಳವೆಬಾವಿಗಳ ಸಮೀಕ್ಷೆ ನಡೆಸಿ, ಆಯಾ ಇಲಾಖೆಗಳ ಸಹಯೋಗದೊಂದಿಗೆ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರ ದೂರಿಗೆ ವಾಟ್ಸಾಪ್ ವ್ಯವಸ್ಥೆ:
ಅಪಾಯಕಾರಿ ಬೋರ್ವೆಲ್ಗಳ ಬಗ್ಗೆ ಸಾರ್ವಜನಿಕರೇ ನೇರವಾಗಿ ದೂರು ನೀಡಲು ವಿಶೇಷ ವಾಟ್ಸಾಪ್ ಸಂಖ್ಯೆ, ವೆಬ್ ಪೋರ್ಟಲ್ ಹಾಗೂ ಜಿಯೋ-ಟ್ಯಾಗ್ ಆಧಾರಿತ ಫೋಟೋ ಅಪ್ಲೋಡ್ ಮಾಡುವ ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ದೂರು ದಾಖಲಾದಾಗಿನಿಂದ ಬೋರ್ವೆಲ್ ಮುಚ್ಚುವವರೆಗಿನ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ಟ್ರ್ಯಾಕ್ ಮಾಡಲಾಗುವುದು. ‘ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕ’ ಮಾಡುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಸಚಿವರು ಪ್ರಕಟಿಸಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಮ್ಮಿನಬಾವಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ವರದಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

