Wed. Oct 7th, 2026

ಕಣ್ಣಿಗೆ ಕಾಣದ ಲೋಕಕ್ಕೆ ಭರವಸೆಯ ಬೆಳಕು: ಬಿಡಿಎ ಅಧ್ಯಕ್ಷ ಪೀಠದಲ್ಲಿ ಅಂಧ ಬಾಲಕನ ಸಂಭ್ರಮ!

Share this with Friends

ಬೆಂಗಳೂರು:ಸರ್ಕಾರಿ ಕಚೇರಿಗಳೆಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ಕಡತಗಳ ರಾಶಿ, ಗಂಭೀರ ಮುಖಭಾವದ ಅಧಿಕಾರಿಗಳು ಮತ್ತು ಸಾರ್ವಜನಿಕರ ಗದ್ದಲ. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮುಖ್ಯ ಕಚೇರಿ ಇತ್ತೀಚೆಗೆ ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ವಿಶೇಷ ಚೇತನ ಮಕ್ಕಳು ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯಬಾರದು ಎಂಬ ಉದಾತ್ತ ಉದ್ದೇಶದಿಂದ, ‘ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್’ ಶಾಲೆಯ 65 ದೃಷ್ಟಿಹೀನ ಮಕ್ಕಳನ್ನು ಬಿಡಿಎ ಕಚೇರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಈ ಭೇಟಿಯ ವೇಳೆ ನೆರೆದಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತಹ ಅಪೂರ್ವ ಘಟನೆಯೊಂದು ನಡೆಯಿತು.

ಒಂದು ದಿನದ ಅಧ್ಯಕ್ಷನಾದ ರಾಹುಲ್!

ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರು ಸೌಜನ್ಯದ ಪರಮಾವಧಿ ಮೆರೆದರು. ತಮ್ಮ ಅಧಿಕೃತ ಆಡಳಿತಾತ್ಮಕ ಕುರ್ಚಿಯ ಮೇಲೆ ರಾಹುಲ್ ಎಂಬ ದೃಷ್ಟಿಹೀನ ಬಾಲಕನನ್ನು ಕೂರಿಸಿ, ಸಾಂಕೇತಿಕವಾಗಿ ಆತನನ್ನು “ಒಂದು ದಿನದ ಬಿಡಿಎ ಅಧ್ಯಕ್ಷ”ನನ್ನಾಗಿ ಮಾಡಿದರು. ಅಧ್ಯಕ್ಷರ ಆಸನದಲ್ಲಿ ಕುಳಿತಾಗ ಬಾಲಕ ರಾಹುಲ್ ಮುಖದಲ್ಲಿ ಮೂಡಿದ ಮುಗ್ಧ ನಗು ಮತ್ತು ಹೆಮ್ಮೆ ಇಡೀ ಸಭಾಂಗಣದಲ್ಲಿದ್ದವರಿಗೆ ಹೊಸ ಚೈತನ್ಯ ನೀಡಿತು.

ಬಳಿಕ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಹ್ಯಾರಿಸ್, “ಯಾರೂ ಕೂಡ ದೃತಿಗೆಡಬೇಕಾದ ಅಗತ್ಯವಿಲ್ಲ. ನೀವೂ ಸಹ ಸಮಾಜದ ಎಲ್ಲರಂತೆ ಸಮಾನರು. ನಿಮ್ಮ ಬೆನ್ನಿಗೆ ನಾವಿದ್ದೇವೆ, ಸರ್ಕಾರವಿದೆ. ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಓದಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ” ಎಂದು ಮಕ್ಕಳಿಗೆ ಸ್ಫೂರ್ತಿ ತುಂಬಿದರು.

ಶಿಕ್ಷಣಕ್ಕೆ ಬಿಡಿಎ ಬೆಂಬಲ:

ಇದೇ ಸಂದರ್ಭದಲ್ಲಿ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಮಾತನಾಡಿ, “ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಮತ್ತು ಅವರಲ್ಲಿ ದೊಡ್ಡ ಕನಸುಗಳನ್ನು ಚಿಗುರಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಇದು ಕೇವಲ ಒಂದು ದಿನದ ಭೇಟಿಗೆ ಸೀಮಿತವಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಈ ಮಕ್ಕಳ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಬಿಡಿಎ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

ಮಕ್ಕಳ ಮೊಗದಲ್ಲಿ ಮೂಡಿದ ಆತ್ಮವಿಶ್ವಾಸ:

“ನಾವು ಎಂದಿಗೂ ಸರ್ಕಾರಿ ಕಚೇರಿಗಳನ್ನು ನೋಡಿರಲಿಲ್ಲ, ಇಲ್ಲಿನ ಆಡಳಿತ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಆದರೆ ಇವತ್ತಿನ ಅನುಭವ ನಮಗೂ ದೊಡ್ಡ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಬಲವಾದ ಆತ್ಮವಿಶ್ವಾಸವನ್ನು ತಂದಿದೆ” ಎಂದು ಮಕ್ಕಳು ಸಂತಸದಿಂದ ನುಡಿದ ಮಾತುಗಳು ಅಧಿಕಾರಿಗಳ ಹೃದಯ ಮುಟ್ಟಿದವು.

ಅಧಿಕಾರಿಗಳು ಸದಾಕಾಲದ ಗಂಭೀರತೆಯನ್ನು ಬದಿಗಿಟ್ಟು ಮಕ್ಕಳೊಂದಿಗೆ ಮುಕ್ತವಾಗಿ ಬೆರೆತು, ಪ್ರೀತಿ-ವಾತ್ಸಲ್ಯದಿಂದ ಪ್ರೋತ್ಸಾಹಿಸಿದರು. ಕಚೇರಿಯ ಆವರಣದಲ್ಲಿ ಅನುಕಂಪಕ್ಕಿಂತ ಹೆಚ್ಚಾಗಿ ಸಮಾನತೆ, ಭರವಸೆ ಮತ್ತು ಪ್ರೀತಿಯ ವಾತಾವರಣ ಎದ್ದು ಕಾಣುತ್ತಿತ್ತು. ದೃಷ್ಟಿ ಇಲ್ಲದಿದ್ದರೂ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂಬ ಅದಮ್ಯ ಚೇತನ ಆ ಮುಗ್ಧ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತಿತ್ತು.

 


Share this with Friends

Related Post