ಬೆಂಗಳೂರು:”ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್) ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಯಾವುದೇ ಕಾರಣಕ್ಕೂ ಟೋಲ್ ಪಾವತಿ ಮಾಡಬಾರದು,” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ನೈಸ್ ಸಂಸ್ಥೆಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ, ಅಪೂರ್ಣ ರಸ್ತೆಯಲ್ಲೇ ನಿಯಮಬಾಹಿರವಾಗಿ ₹4,756.48 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಈ ಅಕ್ರಮ ಟೋಲ್ ವಸೂಲಿಯನ್ನು ಬಂದ್ ಮಾಡಬೇಕು ಎಂದು ಕಟುವಾಗಿ ಒತ್ತಾಯಿಸಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಬುಧವಾರ (ಅಕ್ಟೋಬರ್ 7, 2026) ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ನೈಸ್ ರಸ್ತೆ ಹಗರಣದ ಸಂಪೂರ್ಣ ವಿವರಗಳ ಬಿಡುಗಡೆ ಮಾಡಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಹಾಗು ನೈಸ್ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದರು.
ಮೂಲ ಯೋಜನಾ ವೆಚ್ಚ: ನೈಸ್ ರಸ್ತೆಯ ಅಸಲಿ ವೆಚ್ಚ ₹1,583.76 ಕೋಟಿ ಮಾತ್ರ.
ಇದುವರೆಗೆ ವಸೂಲಿ ಮಾಡಲಾದ ಟೋಲ್: ಮೂಲ ವೆಚ್ಚದ ಮೂರು ಪಟ್ಟು ಅಂದರೆ ಬರೋಬ್ಬರಿ ₹4,756.48 ಕೋಟಿ ಹಣವನ್ನು ಅಕ್ರಮವಾಗಿ ಸುಲಿಗೆ ಮಾಡಲಾಗಿದೆ.
ಟೋಲ್ ಏರಿಕೆಯ ಅಕ್ರಮ ಜಾಲ: 2008-09ರಲ್ಲಿ ವಾರ್ಷಿಕವಾಗಿ ₹5.59 ಕೋಟಿ ಇದ್ದ ಟೋಲ್ ಸಂಗ್ರಹ, 2024-25ರ ವೇಳೆಗೆ ವರ್ಷಕ್ಕೆ ₹734.97 ಕೋಟಿಯ ಬೃಹತ್ ಮೊತ್ತಕ್ಕೆ ತಲುಪಿದೆ.
ಇತರ ಮೂಲಗಳ ಅಕ್ರಮ ಆದಾಯ: ನಿಯಮಬಾಹಿರವಾಗಿ ಭೂಮಿ ಮಾರಾಟದಿಂದ ₹384 ಕೋಟಿ, ಜಂಟಿ ಅಭಿವೃದ್ಧಿ ಯೋಜನೆಗಳ ಮುಂಗಡವಾಗಿ ₹108 ಕೋಟಿ ಹಾಗೂ ಕನ್ವೆನ್ಷನ್ ಸೆಂಟರ್‌ಗಳ ಮೂಲಕ ₹338 ಕೋಟಿ ಗಳಿಸಿದೆ.
ಮೂಲ ಒಪ್ಪಂದ ಮತ್ತು ಕರಾರುಗಳ ಸ್ಪಷ್ಟ ಉಲ್ಲಂಘನೆ
1997ರ ಮೂಲ ಚೌಕಟ್ಟು ಒಪ್ಪಂದದ (FWA) ಪ್ರಕಾರ, 4 ಪಥಗಳ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆ ಹಾಗೂ ನಿರ್ವಹಣಾ ವಲಯಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ನಂತರವೇ ಟೋಲ್ ಪಡೆಯಲು ಅವಕಾಶವಿತ್ತು. ಆದರೆ, ಯಾವುದೇ ನಿಬಂಧನೆ ಪಾಲಿಸದೆ ಅಪೂರ್ಣ ರಸ್ತೆಯಲ್ಲೇ 2008ರಿಂದ ಅಕ್ರಮವಾಗಿ ಟೋಲ್ ಸುಲಿಗೆ ಮಾಡಲಾಗುತ್ತಿದೆ. ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ (ನವೆಂಬರ್ 4, 2002) ನಡೆದ ಸಂಪುಟ ನಿರ್ಣಯದಂತೆ 6 ವರ್ಷಗಳಲ್ಲಿ ರಸ್ತೆ ಪೂರ್ಣಗೊಳಿಸದಿದ್ದರೆ ಟೋಲ್ ವಸೂಲಿಯನ್ನು ಹಿಂಪಡೆಯಬೇಕು ಎಂಬ ಷರತ್ತನ್ನು ಗಾಳಿಗೆ ತೂರಲಾಗಿದೆ.
ಸಚಿವ ಸಂಪುಟಕ್ಕೆ ವಂಚನೆ, ಕೆರೆಗಳ ಅತಿಕ್ರಮಣ!
2004ರಲ್ಲಿ ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ (ODP) ಮೂಲಕ ಸಚಿವ ಸಂಪುಟದ ಯಾವುದೇ ಅನುಮೋದನೆ ಪಡೆಯದೇ ಕಾನೂನುಬಾಹಿರವಾಗಿ ಅಲೈನ್‌ಮೆಂಟ್ ಬದಲಾಯಿಸಿ, ಜಮೀನಿನ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳಲಾಗಿದೆ. ಪೆರಿಫೆರಲ್ ರಸ್ತೆ ಜಮೀನನ್ನು 2,193 ಎಕರೆಯಿಂದ 2,747 ಎಕರೆಗೆ ಹಾಗೂ ಟೋಲ್ ರಸ್ತೆ ಜಮೀನನ್ನು 6,999 ಎಕರೆಯಿಂದ 9,468 ಎಕರೆಗೆ ಏಕಪಕ್ಷೀಯವಾಗಿ ಹೆಚ್ಚಿಸಲಾಗಿದೆ. ಅಲ್ಲದೆ, ‘ದಿಶಾಂಕ್’ ಆಪ್ ಬಳಸಿ ನಡೆಸಿದ ತನಿಖೆಯಲ್ಲಿ ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮುಂದೆ ಸುಳ್ಳು ಹೇಳಿ, ಕೆರೆಗಳನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದು ಪತ್ತೆಯಾಗಿದೆ ಎಂದು ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿದರು.
ನ್ಯಾಯಾಲಯದ ಕಟು ಆದೇಶವಿದ್ದರೂ ಮುಂದುವರಿದ ದರೋಡೆ
ಕಳೆದ ಜುಲೈ 29ರಂದು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ, ODP ಪ್ಲಾನ್ ಮೂಲಕ ಮೂಲ ಒಪ್ಪಂದ ಬದಲಾಯಿಸಿರುವುದನ್ನು “ಸಂವಿಧಾನ ಮತ್ತು ಕಾನೂನು ಮೀರಿ ಎಸಗಿದ ವಂಚನೆ” (Fraud on Statute and Constitution) ಎಂದು ಚಾಟಿ ಬೀಸಿದೆ. ಈ ತೀರ್ಪಿಗೆ ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಆದರೂ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಸಂಪೂರ್ಣ ಅಕ್ರಮ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾಣದ ಕೈಗಳ ಕೈವಾಡದ ಆರೋಪ:
2016ರಲ್ಲಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಟಿ.ಬಿ. ಜಯಚಂದ್ರ ಅವರು ಈ ನೈಸ್ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು ಮಾಡಿದ್ದರು. ಆದರೆ, ಅವರೇ 2025ರ ಮೇ ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವರ ನೇರ ವಾಗ್ದಾಳಿ:
“ನ್ಯಾಯಾಲಯದ ಕಟು ಆದೇಶಗಳಿದ್ದರೂ, ಸುಪ್ರೀಂ ಕೋರ್ಟ್ ಯಾವುದೇ ತಡೆ ನೀಡದಿದ್ದರೂ ಇನ್ನೂ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಅಪ್ಪಟ ದರೋಡೆ. ಅಕ್ರಮ ಸುಲಿಗೆ ನಿಲ್ಲಿಸಲು ಇನ್ನೂ ಎಷ್ಟು ವರ್ಷ ಬೇಕು? ಇನ್ನು ಹತ್ತು ವರ್ಷ ಟೋಲ್ ವಸೂಲಿ ಇದೆ ಎನ್ನುವುದೆಲ್ಲಾ ಈಗ ನಡೆಯಲ್ಲ. ತಕ್ಷಣವೇ ಟೋಲ್ ಸಂಗ್ರಹ ಬಂದ್ ಆಗಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಟೋಲ್ ಪಾವತಿ ಮಾಡಬಾರದು”ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಹಾಗೂ ರಾಜ್ಯ ವಕ್ತಾರ ಹೆಚ್.ಎನ್. ದೇವರಾಜು ಉಪಸ್ಥಿತರಿದ್ದರು

