Sat. Oct 10th, 2026

ನಾಳೆ 11 ಜಿಲ್ಲೆಗಳಲ್ಲಿ ಕೆ-ಸೆಟ್ ಪರೀಕ್ಷೆ: 1.29 ಲಕ್ಷ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ, ಮುಖ ಚಹರೆ ತಪಾಸಣೆ ಕಡ್ಡಾಯ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ (K-SET) ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಾಳೆ (ಅಕ್ಟೋಬರ್ 11, ಭಾನುವಾರ) ರಾಜ್ಯಾದ್ಯಂತ ನಡೆಸಲಿದ್ದು, ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಈ ಕುರಿತು ಶನಿವಾರ ಮಾಹಿತಿ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

11 ಜಿಲ್ಲೆಗಳ 326 ಕೇಂದ್ರಗಳಲ್ಲಿ ಪರೀಕ್ಷೆ

ಈ ಬಾರಿ ಒಟ್ಟು 37 ವಿವಿಧ ಐಚ್ಛಿಕ ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ನಡೆಯುತ್ತಿದ್ದು, ರಾಜ್ಯಾದ್ಯಂತ 1,29,212 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಸೇರಿದಂತೆ ಒಟ್ಟು 11 ಜಿಲ್ಲೆಗಳ 326 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಎಲ್ಲಾ 37 ವಿಷಯಗಳ ಪರೀಕ್ಷೆಗಳು ನಡೆದರೆ, ಇನ್ನುಳಿದ ಜಿಲ್ಲಾ ಕೇಂದ್ರಗಳಲ್ಲಿ ಕೇವಲ 13 ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.

3 ಗಂಟೆ ಅವಧಿ; ಒಟ್ಟಿಗೆ ಸಿಗಲಿದೆ ಎರಡು ಪ್ರಶ್ನೆ ಪತ್ರಿಕೆ

ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ಅಭ್ಯರ್ಥಿಗಳಿಗೆ ಪತ್ರಿಕೆ-1 ಮತ್ತು ಪತ್ರಿಕೆ-2 ರ ಪ್ರಶ್ನೆ ಪತ್ರಿಕೆಗಳನ್ನು ಒಟ್ಟಿಗೇ ನೀಡಲಾಗುತ್ತದೆ. ಒಟ್ಟು 3 ಗಂಟೆಗಳ ಕಾಲಾವಕಾಶದಲ್ಲಿ ಅಭ್ಯರ್ಥಿಗಳು 100 ಅಂಕಗಳ ಸಾಮಾನ್ಯ ಜ್ಞಾನದ ಪತ್ರಿಕೆ ಹಾಗೂ 200 ಅಂಕಗಳ ವಿಷಯವಾರು ಪತ್ರಿಕೆ ಸೇರಿದಂತೆ ಒಟ್ಟು 300 ಅಂಕಗಳಿಗೆ ಉತ್ತರಿಸಬೇಕಾಗುತ್ತದೆ. ಎರಡು ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್ (OMR) ಶೀಟ್‌ಗಳನ್ನು ನೀಡಲಾಗುತ್ತಿದ್ದು, ಅಭ್ಯರ್ಥಿಗಳು ಆಯಾಯ ಓಎಂಆರ್ ಶೀಟ್‌ಗಳಲ್ಲೇ ಉತ್ತರಗಳನ್ನು ಅತ್ಯಂತ ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಪ್ರಸನ್ನ ಅವರು ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಫೇಸ್ ರೆಕಗ್ನಿಷನ್ ತಪಾಸಣೆ; ಹದ್ದಿನ ಕಣ್ಣು

ಪ್ರಾಧಿಕಾರವು ಇತ್ತೀಚಿನ ಪರೀಕ್ಷೆಗಳಲ್ಲಿ ತಂದಿರುವ ಕಟ್ಟುನಿಟ್ಟಿನ ನಿಯಮಗಳನ್ನೇ ಈ ಪರೀಕ್ಷೆಗೂ ಅನ್ವಯಿಸಿದೆ. ಅಭ್ಯರ್ಥಿಗಳಿಗೆ ಕಡ್ಡಾಯ ವಸ್ತ್ರ ಸಂಹಿತೆ (Dress Code) ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರನ್ನೂ ಮುಖ ಚಹರೆ ಪತ್ತೆ (Face Recognition) ತಂತ್ರಜ್ಞಾನದ ಮೂಲಕ ತೀವ್ರ ಶೋಧನೆಗೆ ಒಳಪಡಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಭದ್ರತೆಗಾಗಿ ಅಗತ್ಯ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಡೀ ಪರೀಕ್ಷಾ ಪ್ರಕ್ರಿಯೆಯು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಯಲಿದ್ದು, ಅಕ್ರಮಗಳಿಗೆ ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಎಚ್ಚರಿಸಿದೆ.

 


Share this with Friends

Related Post