Sat. Oct 10th, 2026

ವಿಮಾನದೊಳಗೇ ಸಿಜೆಪಿ ನಾಯಕರ ಬಂಧನ, ಯೂಟ್ಯೂಬರ್ ಧ್ರುವ್ ರಾಠಿ ಕೂಡ ಪೊಲೀಸ್ ವಶಕ್ಕೆ: ಜಂತರ್ ಮಂತರ್ ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ

Share this with Friends

ನವದೆಹಲಿ: ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ನಿಯಮಾವಳಿಗಳನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ (ಅಕ್ಟೋಬರ್ 10, 2026) ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯು ಇಡೀ ರಾಜಧಾನಿಯನ್ನು ನಡುಗಿಸಿದೆ.

ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ಭಾರಿ ಕಾರ್ಯಾಚರಣೆ ನಡೆಸಿದ್ದು, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ರನ್‌ವೇನಲ್ಲೇ ಮುಗಿದ ಜಿಎಫ್‌ಟಿ ಆಪರೇಷನ್!

ಮುಂಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಗೆ ಶನಿವಾರ ಬೆಳಿಗ್ಗೆ ಬಂದಿಳಿದ ವಿಮಾನದೊಳಗೆ ಪ್ರಯಾಣಿಕರು ಕೆಳಗಿಳಿಯುವ ಮುನ್ನವೇ ದೆಹಲಿ ಪೊಲೀಸರು ದಿಢೀರ್ ಪ್ರವೇಶಿಸಿದರು. ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ, ಸಹ-ಸಂಘಟಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ವಿಮಾನದ ಸೀಟುಗಳಿಂದಲೇ ವಶಕ್ಕೆ ಪಡೆದು ವಿಮಾನ ನಿಲ್ದಾಣದ ಹಿಂಬಾಗಿಲಿನಿಂದ ರಹಸ್ಯ ಸ್ಥಳಕ್ಕೆ ಕರೆದೊಯ್ದರು.

ಈ ವೇಳೆ ಇನ್‌ಸ್ಟಾಗ್ರಾಮ್ ಲೈವ್ ಬಂದ ಅಭಿಜಿತ್ ದೀಪ್ಕೆ, “ನಾವು ನಮ್ಮ ಪ್ರಜಾಪ್ರಭುತ್ವದ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಇಂತಹ ಸರ್ವಾಧಿಕಾರಿ ಧೋರಣೆಯ ಧರ್ಪಕಾಡಿಗೆ ನಾವು ಹೆದರುವುದಿಲ್ಲ, ಬೇಕಿದ್ದರೆ ನಮ್ಮ ಮೇಲೆ ಯುಎಪಿಎ (UAPA) ಹಾಕಿ,” ಎಂದು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಗುರಗಾಂವ್‌ನಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಬಂಧನ

ಇತ್ತ ದೆಹಲಿಗೆ ಬರಲು ಸಜ್ಜಾಗುತ್ತಿದ್ದ ಕೋಟ್ಯಂತರ ಫಾಲೋವರ್ಸ್ ಹೊಂದಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಹರಿಯಾಣದ ಗುರಗಾಂವ್‌ನ ಸೆಕ್ಟರ್ 56ರ ಫ್ಲಾಟ್‌ನಿಂದ ಬೆಳ್ಳಂಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಅವರ ಮನೆಯ ಹೊರಗೆ 50ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದರು. ದೆಹಲಿಯಲ್ಲಿ ನಿಷೇಧಾಜ್ಞೆ (BNSS ಸೆಕ್ಷನ್ 163) ಇರುವುದರಿಂದ ಮತ್ತು ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಂಧನ ಮಾಡಲಾಗಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಇವರ ಜೊತೆಗೆ ಇನ್ಫ್ಲುಯೆನ್ಸರ್ ಕಾವ್ಯಾ ಕರ್ನಾಟಕ್ ಹಾಗೂ ಸಿಜೆಪಿ ಕಾನೂನು ಮುಖ್ಯಸ್ಥೆ ರತ್ನ ಸಿಂಗ್ ಅವರನ್ನೂ ಬಂಧಿಸಲಾಗಿದೆ.

ಸಂಪೂರ್ಣ ಸ್ತಬ್ಧಗೊಂಡ ನವದೆಹಲಿ

ಪ್ರತಿಭಟನೆಯ ತೀವ್ರತೆಯನ್ನು ತಡೆಯಲು ದೆಹಲಿ ಪೊಲೀಸರು ಇಡೀ ನವದೆಹಲಿ ವ್ಯಾಪ್ತಿಯನ್ನು ಕಬ್ಬಿಣದ ಕೋಟೆಯನ್ನಾಗಿ ಪರಿವರ್ತಿಸಿದ್ದರು.

ರೈಲುಗಳ ರದ್ದು: ನವದೆಹಲಿ (NDLS) ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಬರಬೇಕಿದ್ದ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು.

ಗಡಿಗಳ ಸೀಲ್ ಮತ್ತು ಇಂಟರ್ನೆಟ್ ಸ್ಥಗಿತ: ದೆಹಲಿ-ನೋಯ್ಡಾ ಚಿಲ್ಲಾ ಗಡಿಯನ್ನು ಸಂಪೂರ್ಣ ಸೀಲ್ ಮಾಡಿ ಬಿಎಸ್‌ಎಫ್ ಪಡೆಯನ್ನು ನಿಯೋಜಿಸಲಾಗಿತ್ತು. ಇನ್ನು ಜಂತರ್ ಮಂತರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.

ಬಸ್‌ಗಳಲ್ಲಿ ಪ್ರತಿಭಟನಾಕಾರರ ಸಾಗಾಟ: ಜಂತರ್ ಮಂತರ್ ತಲುಪಲು ಯತ್ನಿಸಿದ ಎಡಪಂಥೀಯ ಸಂಘಟನೆಗಳ ನಾಯಕರು, ವಿದ್ಯಾರ್ಥಿಗಳು ಹಾಗೂ ಐಸಾ (AISA) ನಾಯಕಿ ನೇಹಾ ಬೋರಾ ಸೇರಿದಂತೆ ಸಾವಿರಾರು ಜನರನ್ನು ಪೊಲೀಸರು ವೃತ್ತಗಳಲ್ಲೇ ತಡೆದು ಬಸ್‌ಗಳಲ್ಲಿ ತುಂಬಿಸಿ ನಗರದ ಹೊರವಲಯಕ್ಕೆ ಸಾಗಿಸಿದರು.

ಮುಖಂಡರಿಲ್ಲದಿದ್ದರೂ ಮುಂದುವರಿದ ಹೋರಾಟ

ಮುಖ್ಯ ನಾಯಕರೆಲ್ಲರೂ ಜೈಲು ಪಾಲಾಗಿದ್ದರೂ, ಮುಂಚಿತವಾಗಿ ರೆಕಾರ್ಡ್ ಮಾಡಲಾಗಿದ್ದ ವಿಡಿಯೋ ಸಂದೇಶದ ಮೂಲಕ ಅಭಿಜಿತ್ ದೀಪ್ಕೆ ಅವರು ತಮ್ಮ ಅನುಪಸ್ಥಿತಿಯಲ್ಲಿ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿದರು. ಮುಖಂಡರು ಇಲ್ಲದಿದ್ದರೂ ದೆಹಲಿಯ ವಿವಿಧ ರಸ್ತೆಗಳಲ್ಲಿ ಜಂತರ್ ಮಂತರ್ ಚಲೋ ಮುಂದುವರಿದಿದ್ದು, ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲೂ ಪ್ರತಿಭಟನೆಯ ಬಿಸಿ ತಟ್ಟಿದೆ.

 

 


Share this with Friends

Related Post