Sat. Oct 10th, 2026

ಕ್ಯಾನ್ಸರ್ ಔಷಧಗಳ ದರ ಇಳಿಕೆಗೆ ಕೇಂದ್ರದ ಒಪ್ಪಿಗೆ; ಆರೋಗ್ಯ ಸಚಿವ ಯು.ಟಿ. ಖಾದರ್

Share this with Friends

ಬೆಂಗಳೂರು: ದೇಶಾದ್ಯಂತ ಲಕ್ಷಾಂತರ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬದವರ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶಕ್ಕೆ (Trade Margin) ಗರಿಷ್ಠ ಶೇ. 30ರಷ್ಟು ಮಿತಿ ವಿಧಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ತಾತ್ವಿಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

ಆರೋಗ್ಯ ಸೌಧದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್,ಕರ್ನಾಟಕ ಸರ್ಕಾರದ ನಿರಂತರ ಪತ್ರ ವ್ಯವಹಾರ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಈ ಮಹತ್ವದ ಸುಧಾರಣೆ ಜಾರಿಗೆ ಬಂದಿದ್ದು, ಈ ನಿಯಂತ್ರಣ ಕ್ರಮದಿಂದಾಗಿ ದೇಶದ ನಾಗರಿಕರಿಗೆ ವಾರ್ಷಿಕ ಸುಮಾರು 2,500 ಕೋಟಿ ರೂ. ಉಳಿತಾಯವಾಗಲಿದೆ ಎಂದರು.

52 ಪಟ್ಟು ಹೆಚ್ಚಿನ ದರ ವಸೂಲಿಗೆ ಬ್ರೇಕ್!

ಹಲವು ತಿಂಗಳುಗಳಿಂದ ಕ್ಯಾನ್ಸರ್ ಔಷಧಗಳ ಕೃತಕ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿದ್ದೆ, ಔಷಧ ಕಂಪನಿಗಳು ಹಾಗೂ ವಿತರಕರ ನಡುವಿನ ಬೆಲೆ ತಾರತಮ್ಯದ ಆಘಾತಕಾರಿ ಅಂಕಿ-ಅಂಶಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದೆ. “ಕೇವಲ 86 ರೂಪಾಯಿ ಉತ್ಪಾದನಾ ವೆಚ್ಚವಿರುವ ಕ್ಯಾನ್ಸರ್ ಔಷಧವನ್ನು ಮಾರುಕಟ್ಟೆಯಲ್ಲಿ ಬರೋಬ್ಬರಿ 4,528 ರೂಪಾಯಿಗೆ ಮಾರಲಾಗುತ್ತಿತ್ತು. ಹಾಗೆಯೇ 160 ರೂಪಾಯಿಯ ಔಷಧವನ್ನು 7,110 ರೂಪಾಯಿಗೆ ಮತ್ತು 118 ರೂಪಾಯಿಯ ಔಷಧವನ್ನು 4,416 ರೂಪಾಯಿಗೆ ರೋಗಿಗಳಿಗೆ ಮಾರಾಟ ಮಾಡಿ ಸುಲಿಗೆ ಮಾಡಲಾಗುತ್ತಿತ್ತು. ಉತ್ಪಾದನಾ ವೆಚ್ಚಕ್ಕಿಂತ 10 ರಿಂದ 52 ಪಟ್ಟು ಹೆಚ್ಚಿನ ಎಂಆರ್‌ಪಿ (MRP) ನಿಗದಿಪಡಿಸಿ ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು,” ಎಂದು ಅವರು ವಿಷಾದಿಸಿದರು.

ಕರ್ನಾಟಕದ ತನಿಖಾ ವರದಿಗೆ ಮಣಿದ ಕೇಂದ್ರ

ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದ ಔಷಧ ಮಾರುಕಟ್ಟೆಯಲ್ಲಿನ ಈ ಭಾರಿ ದರ ವ್ಯತ್ಯಾಸವನ್ನು ಪತ್ತೆಹಚ್ಚಿ, ಕೇಂದ್ರ ಔಷಧ ನಿಯಂತ್ರಣ ಮಂಡಳಿ ಮತ್ತು ಆಹಾರ ಸುರಕ್ಷತಾ ಇಲಾಖೆಯ ಕಮಿಷನರ್ ಶ್ರೀನಿವಾಸ್ ಕೆ. ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಅಧಿಕೃತ ಪತ್ರ ಬರೆದಿತ್ತು. ಔಷಧಗಳ ಮೂಲ ಖರೀದಿ ದರ ಹಾಗೂ ರೋಗಿಗಳಿಗೆ ವಿಧಿಸುವ ಅಂತಿಮ ಬಿಲ್ ದರವನ್ನು ಕಡ್ಡಾಯವಾಗಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಮತ್ತು ಎನ್‌ಪಿಪಿಎ (NPPA) ಮೂಲಕ ಎಲ್ಲಾ ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಗಂಭೀರ ಶಿಫಾರಸು ಮಾಡಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವಾಲಯವು ಇದೀಗ ಶೇ. 30ರಷ್ಟು ಟ್ರೇಡ್ ಮಾರ್ಜಿನ್ ಮಿತಿಯನ್ನು ಘೋಷಿಸಿದೆ ಎಂದರು.

ಮತ್ತಷ್ಟು ಅಗತ್ಯ ಔಷಧಗಳ ಬೆಲೆ ಇಳಿಕೆಗೆ ಮುನ್ಸೂಚನೆ

 “ಕೇವಲ ಕ್ಯಾನ್ಸರ್ ಮಾತ್ರವಲ್ಲದೆ ಸಾರ್ವಜನಿಕರು ದಿನನಿತ್ಯ ಬಳಸುವ ಇತರೆ ದುಬಾರಿ ಹಾಗೂ ನಿಗದಿತವಲ್ಲದ (Non-scheduled) ಜೀವರಕ್ಷಕ ಔಷಧಗಳ ಬೆಲೆಗಳಿಗೂ ಇದೇ ರೀತಿಯ ಮಿತಿಯನ್ನು ವಿಸ್ತರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ತರಲಿದೆ,” ಎಂದು ಮುನ್ಸೂಚನೆ ನೀಡಿದರು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದೇ ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವರು ಪುನರುಚ್ಚರಿಸಿದರು.


Share this with Friends

Related Post