ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಉಚಿತ ವಿದ್ಯುತ್ ಯೋಜನೆಯಾದ ‘ಗೃಹ ಜ್ಯೋತಿ’ ಸೌಲಭ್ಯವನ್ನು ಪಡೆಯುತ್ತಿರುವ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹ ಹಾಗೂ ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31, 2026ರ ವರೆಗೆ ವಿಸ್ತರಿಸಿ ಇಂಧನ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಿರ್ದೇಶನದಂತೆ, ಗೃಹ ಜ್ಯೋತಿ ಯೋಜನೆಯ ಅರ್ಹ ಪ್ರಯೋಜನಗಳು ಕೇವಲ ‘ಜೀವಂತ ಫಲಾನುಭವಿಗಳಿಗೆ’ ಮಾತ್ರ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಈ ಪರಿಶೀಲನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆಧಾರ್ ಲಿಂಕ್ ಆಗಿರುವ ಮೂಲ ಮನೆ ಮಾಲೀಕರು ಅಥವಾ ಬಾಡಿಗೆದಾರರು ಮೃತಪಟ್ಟಿರುವ ಪ್ರಕರಣಗಳು, ಬಾಡಿಗೆದಾರರು ಮನೆ ಬದಲಾಯಿಸಿರುವ ಜಾಗಗಳು ಹಾಗೂ ಮನೆ ಖರೀದಿ ಮತ್ತು ಮಾರಾಟದ ಸಂದರ್ಭಗಳಲ್ಲಿ ಹಳೆಯ ಫಲಾನುಭವಿಗಳ ವಿವರಗಳು ಪರಿಷ್ಕರಣೆಯಾಗದಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರ್ಹರನ್ನು ಮರುಪರಿಶೀಲಿಸಲು ಜುಲೈ 1 ರಿಂದಲೇ ವಿಶೇಷ ಅಭಿಯಾನ ಆರಂಭಿಸಲಾಗಿತ್ತು.
ಮೀಟರ್ ರೀಡರ್‌ಗಳಿಂದ ಮನೆ ಮನೆಗೆ ಭೇಟಿ: ದಾಖಲೆ ಸಂಗ್ರಹ ಕಡ್ಡಾಯ
ಸರ್ಕಾರದ ನೂತನ ಆದೇಶದ ಪ್ರಕಾರ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (Bescom, Mescom, HESCOM, GESCOM, CESC) ಸಿಬ್ಬಂದಿ ಹಾಗೂ ಮಾಪಕ ಓದುಗರು (ಮೀಟರ್ ರೀಡರ್‌ಗಳು) ಗೃಹ ಜ್ಯೋತಿ ನೊಂದಾಯಿತ ಮನೆಗಳಿಗೆ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಗ್ರಾಹಕರಿಂದ ಈ ಕೆಳಗಿನ ಹೆಚ್ಚುವರಿ ಮಾಹಿತಿಗಳ ಅಗತ್ಯ ದಾಖಲೆಗಳನ್ನು ಪಡೆದು ಸೇವಾಸಿಂಧು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಿದ್ದಾರೆ:
ಪಡಿತರ ಚೀಟಿ (Ration Card) ಸಂಖ್ಯೆ
ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ
ಅರ್ಜಿದಾರರ ಪ್ರಸ್ತುತ ಭಾವಚಿತ್ರ ಹಾಗೂ ಪ್ರವರ್ಗ (Category)
ಆದಾಯ ತೆರಿಗೆ ಪಾವತಿ ಮತ್ತು ವೃತ್ತಿಗೆ ಸಂಬಂಧಿಸಿದ ವಿವರಗಳು
ಕಾಲಾವಕಾಶ ವಿಸ್ತರಣೆಗೆ ಕಾರಣಗಳೇನು?
ಈ ಹಿಂದೆ ನೀಡಲಾಗಿದ್ದ ಮೂರು ತಿಂಗಳ ಮರುಪರಿಶೀಲನಾ ಅವಧಿಯು ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡಿತ್ತು. ಆದರೆ, ರಾಜ್ಯಾದ್ಯಂತ ಬೀಗ ಹಾಕಿರುವ ಮನೆಗಳು (Door Locked), ಖಾಲಿ ಇರುವ ಸ್ಥಾವರಗಳು, ಮತದಾರರ ಚೀಟಿ ವಿವರಗಳ ತಾಳೆಯಾಗದಿರುವುದು ಹಾಗೂ ಸೌರಶಕ್ತಿ ಮೇಲ್ಛಾವಣಿ ಹೊಂದಿರುವ ವಿಶೇಷ ಪ್ರಕರಣಗಳ ಮರುಪರಿಶೀಲನೆಗೆ ಹೆಚ್ಚಿನ ಸಮಯದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಸರ್ಕಾರವು ಅಕ್ಟೋಬರ್ 31 ರವರೆಗೆ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶವನ್ನು ವಿಸ್ತರಿಸಿದೆ.
ನಿಗದಿತ ನಾಲ್ಕು ತಿಂಗಳ ಒಳಗಾಗಿ (31.10.2026) ಈ ಇಂಧೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಗಡುವು ವಿಧಿಸಿದೆ. ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಉಳಿದ ಯಾವುದೇ ನಿಯಮ ಹಾಗೂ ಷರತ್ತುಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

