ನವದೆಹಲಿ: “ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಿಲ್ಲ. ಬದಲಾಗಿ ಜನಸಂದಣಿ ಹೆಚ್ಚಾಗಿದ್ದರಿಂದ ನನ್ನ ಸುರಕ್ಷತೆಯ ಕಾಳಜಿಯಿಂದ ಹಿಂದೆ ಬರುತ್ತಿದ್ದ ವಾಹನವನ್ನು ಹತ್ತುವಂತೆ ಸಲಹೆ ನೀಡಿದರು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಚಲೋ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿಗಳನ್ನು ತಳ್ಳಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಪ್ರತಿಭಟನಾ ನಿರತರ ಸಂಖ್ಯೆ ಹೆಚ್ಚಾಗಿದ್ದರಿಂದ ರಾಹುಲ್ ಗಾಂಧಿ ಅವರು ನನ್ನ ಮೇಲೆ ಕಾಳಜಿ ತೋರಿದ್ದಾರೆಯೇ ಹೊರತು ತಳ್ಳಿಲ್ಲ. ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇರುವುದರಿಂದ ಈ ರೀತಿಯ ಸುಳ್ಳು ಸಂಗತಿಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಆರೋಪಗಳಿಗೆ ವ್ಯಂಗ್ಯದ ತಿರುಗೇಟು:
ಸಚಿವ ಸಂಪುಟದ ಸಹೋದ್ಯೋಗಿಗಳ ಸ್ಟಿಂಗ್ ಆಪರೇಷನ್ ಮತ್ತು ಫೋನ್ ಟ್ಯಾಪಿಂಗ್ ಜಾಲದ ಹಿಂದೆ ಮುಖ್ಯಮಂತ್ರಿಗಳೇ ಇದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪಗಳಿಗೂ ಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. “ಕುಮಾರಸ್ವಾಮಿಯವರು ತುಂಬಾ ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ, ಇದಕ್ಕೆ ಬಹಳ ಸಂತೋಷ” ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಅವರ ಇಂತಹ ನಿರಂತರ ಆರೋಪಗಳಿಗೆ ಕಾಲವೇ ಸೂಕ್ತ ಉತ್ತರ ನೀಡಲಿದೆ. ಅವರು ಹೇಳುತ್ತಿರುವ ದಾಖಲೆಗಳು ಏನೇ ಇದ್ದರೂ, ಅವುಗಳನ್ನು ತರಿಸಿ ಸ್ವತಃ ಅವರ ಗಮನಕ್ಕೆ ತರುತ್ತೇನೆ. ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಅವರು ಹೇಳುತ್ತಿರುವುದರಿಂದ, ಅವರ ಬಳಿ ಇರುವ ಸಾಕ್ಷ್ಯ ಹಾಗೂ ದಾಖಲೆಗಳನ್ನು ಅವರೇ ತನಿಖಾ ಸಂಸ್ಥೆಗಳಿಗೆ ನೀಡಲಿ ಎಂದು ಮುಖ್ಯಮಂತ್ರಿಗಳು ನೇರ ಸವಾಲು ಹಾಕಿದ್ದಾರೆ.

