ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ವಿಡಿಯೋಗೆ ತಮ್ಮ ಹೆಸರನ್ನು ಅನಗತ್ಯವಾಗಿ ಜೋಡಿಸಿ ಅಪಪ್ರಚಾರ ಮಾಡಲಾಗುತ್ತಿದ್ದು, ಇದು ರಾಜಕೀಯ ದುರುದ್ದೇಶದಿಂದ ನಡೆಸಲಾಗುತ್ತಿರುವ ಚಾರಿತ್ರ್ಯಹನನದ ಯತ್ನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಎಕ್ಸ್ (X) ವೇದಿಕೆಯಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, “ಈ ಸ್ಟಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೂ ಕೆಲವು ಕಿಡಿಗೇಡಿಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಆದ್ದರಿಂದ ನನ್ನ ಹೆಸರಿರುವ ಈ ವಿಡಿಯೋವನ್ನು ಯಾವುದೇ ಪತ್ರಿಕೆ, ಟಿವಿ ಚಾನೆಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಸುಳ್ಳನ್ನು ಸತ್ಯ ಮಾಡುವ ಕಾಲ, ಮುನ್ನೆಚ್ಚರಿಕೆಯಷ್ಟೇ:
“ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ನನ್ನ ಐದು ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕದಂತಿದ್ದು, ನಾಡಿನ ಜನತೆಗೂ ನನ್ನ ಮೇಲಿನ ವಿಶ್ವಾಸವಿದೆ. ಆದರೆ, ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ತುಂಬಾ ಸುಲಭವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೆಟ್ಟಿಲೇರಿದ್ದೇನೆಯೇ ಹೊರತು ನನಗೆ ಯಾವುದೇ ರೀತಿಯ ಭಯವಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ನಡೆಗೆ ವಿಷಾದ:
ತಾವು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿಯೇ ಇದ್ದು, ಐದು ದಶಕಗಳ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಮಾಧ್ಯಮಗಳ ಸ್ವತಂತ್ರಕ್ಕೆ ಅಡ್ಡಿಪಡಿಸಿಲ್ಲ ಎಂದು ಸ್ಮರಿಸಿರುವ ಸಿದ್ದರಾಮಯ್ಯ, “ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ, ಈ ಬಗ್ಗೆ ನನಗೆ ವಿಷಾದವಿದೆ” ಎಂದಿದ್ದಾರೆ.
ಈ ವಿವಾದಿತ ಸ್ಟಿಂಗ್ ಆಪರೇಷನ್ ವಿಡಿಯೋದ ಹಿಂದೆ ಇರುವ ಸತ್ಯಾಸತ್ಯತೆಯನ್ನು ಹೊರತರಲು ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ನೀಡಲಾಗಿದ್ದು, ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯ ಹೊರಬರಲಿದೆ. ಅಲ್ಲಿಯವರೆಗೆ ಮಾಧ್ಯಮಗಳು ಹಾಗೂ ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

