Wed. Oct 14th, 2026

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಬ್ಬದ ಗಿಫ್ಟ್: 33ನೇ ಕಂತಿನ ₹2,482 ಕೋಟಿ ಬಿಡುಗಡೆ

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಒಟ್ಟು 2,482 ಕೋಟಿ ರೂಪಾಯಿ ಅನುದಾನವನ್ನು ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಯ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಈ ಮಹತ್ವದ ವಿಷಯವನ್ನು ಖಚಿತಪಡಿಸಿದ್ದು, ಇನ್ನು ಎರಡು ಮೂರು ದಿನಗಳ ಅವಧಿಯಲ್ಲಿ ರಾಜ್ಯದ ಸುಮಾರು 1.24 ಕೋಟಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಯೋಜನೆ ಆರಂಭವಾದ ದಿನದಿಂದ ಇದುವರೆಗೆ ಯಶಸ್ವಿಯಾಗಿ 32 ಕಂತುಗಳ ಹಣವನ್ನು ಪಾವತಿಸಲಾಗಿದ್ದು, ಪ್ರತಿ ಗೃಹಿಣಿಯ ಖಾತೆಗೆ ಒಟ್ಟು 64,000 ರೂಪಾಯಿ ತಲುಪಿದೆ. ಪ್ರಸ್ತುತ ಬಿಡುಗಡೆಯಾಗಿರುವ 33ನೇ ಕಂತಿನ ತಲಾ 2,000 ರೂಪಾಯಿ ಜಮೆಯಾದ ನಂತರ, ಪ್ರತಿ ಮನೆಯ ಯಜಮಾನಿ ಸರ್ಕಾರದಿಂದ ಪಡೆದ ಒಟ್ಟು ಮೊತ್ತವು 66,000 ರೂಪಾಯಿಗೆ ಏರಿಕೆಯಾಗಲಿದೆ. ದಸರಾ ಹಬ್ಬದ ಈ ಸುಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಣವು ಹಬ್ಬದ ಸನಿಹದಲ್ಲಿರುವ ಮಹಿಳೆಯರ ಆರ್ಥಿಕ ಅಗತ್ಯಗಳಿಗೆ ನೆರವಾಗಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೂರಿರುವ ಬರ ಪರಿಸ್ಥಿತಿಯ ನಡುವೆ, ಗೃಹಲಕ್ಷ್ಮಿಯ ಈ ನಿಯಮಿತ ಆರ್ಥಿಕ ನೆರವು ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಹಿಳೆಯರಿಗೆ ದೊಡ್ಡ ಮಟ್ಟದ ಆಸರೆಯಾಗಿ ಪರಿಣಮಿಸಿದೆ. ಹಬ್ಬದ ದಿನಗಳಲ್ಲಿ ಗೃಹಿಣಿಯರ ಕೈಗೆ ಸಕಾಲದಲ್ಲಿ ಹಣ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶಕ್ತಿ ತುಂಬಿರುವ ಮುಖ್ಯಮಂತ್ರಿಗಳಿಗೆ ದಿನೇಶ್ ಗೂಳಿಗೌಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜ್ಯದ 1.24 ಕೋಟಿ ಮಹಿಳೆಯರಿಗೆ ಈ ಯೋಜನೆ ತಲುಪಿಸಲು ಸರ್ಕಾರ ಇದುವರೆಗೆ ಭಾರಿ ಮೊತ್ತದ ಬಂಡವಾಳವನ್ನು ವ್ಯಯಿಸಿದೆ ಎಂದು ಅವರು ಪ್ರಗತಿ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

 

 


Share this with Friends

Related Post